ಜಗನ್ನಾಥನ ರಥಯಾತ್ರೆ
ಭಾರತದಲ್ಲಿ ಹಿಂದೂ ಧರ್ಮಾಚರಣೆಯಲ್ಲಿ ವರ್ಷಪೂರ್ತಿ ರಥೋತ್ಸವಗಳು ಒಂದಿಲ್ಲೊಂದು ಕಡೆ ನಡೆಯುತ್ತಲೇ ಇರುತ್ತದೆ. ಆದರೆ ಅಂಥಹ ರಥೋತ್ಸವಗಳಲ್ಲಿ ಪ್ರಪಂಚದಲ್ಲೇ ಪ್ರಸಿದ್ಧಿ ಪಡೆದಿರುವ ರಥೋತ್ಸವ ಎಂದರೆ ಒಡಿಸ್ಸಾದ ಪುರಿ ನಗರಿಯಲ್ಲಿ ನಡೆಯುವ ಜಗನ್ನಾಥನ ರಥಯಾತ್ರೆ.
ಈ ಯಾತ್ರೆಯನ್ನು ನೋಡಲು ಲಕ್ಷೋಪಾದಿಯಲ್ಲಿ ದೇಶ ವಿದೇಶಗಳಿಂದ ಭಕ್ತರು ಪುರಿಗೆ ಆಗಮಿಸುತ್ತಾರೆ. ಇದೊಂದು ಧಾರ್ಮಿಕ ರಥಯಾತ್ರೆಯಾಗಿದ್ದು ಇದನ್ನು ಪುರಿಯ ಪ್ರಮುಖ ದೇವರಾದ ಜಗನ್ನಾಥ, ಆತನ ಸಹೋದರಿ ದೇವಿ ಸುಭದ್ರ ಹಾಗೂ ಸಹೋದರ ಬಲಭದ್ರ ದೇವರಿಗೆ ನಡೆಯುತ್ತದೆ. ಇದನ್ನು ದಶವತಾರ್ ಯಾತ್ರೆ, ನವದಿನ್ ಯಾತ್ರೆ, ಗುಂಡಿಚಾ ಯಾತ್ರೆ ಹಾಗೂ ಕಾರ್ ಯೋತ್ಸವ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. 9 ದಿನಗಳ ಕಾಲ ನಡೆಯುವ ಸುಧೀರ್ಘ ಉತ್ಸವ ಇದಾಗಿದೆ.
ರಥಯಾತ್ರೆಯ ಇತಿಹಾಸ: ಪುರಿಯ ರಥಯಾತ್ರೆ ವಿಶ್ವದಲ್ಲಿನ ಅತಿ ಪುರಾತನ ಧಾರ್ಮಿಕ ಆಚರಣೆಯಾಗಿದೆ. ಹಿಂದೂ ಪುರಾಣಗಳಾದ ಪದ್ಮ ಪುರಾಣ, ಬ್ರಹ್ಮ ಪುರಾಣ ಹಾಗೂ ಸ್ಕಂದ ಪುರಾಣಗಳಲ್ಲಿ ರಥಯಾತ್ರೆಯ ಬಗ್ಗೆ ಉಲ್ಲೇಖವಿದೆ. ಪೌರಾಣಿಕ ಹಿನ್ನಲೆಯ ಪ್ರಕಾರ ಸುಭದ್ರೆ ಒಮ್ಮೆ ನಗರ ಪ್ರದಕ್ಷಿಣೆ ಮಾಡಬೇಕೆಂದು ಆಸೆ ವ್ಯಕ್ತಪಡಿಸಿದಾಗ ಸೋದರರಾದ ಕೃಷ್ಣ ಹಾಗೂ ಬಲರಾಮರು ಆಕೆಯನ್ನು ರಥದಲ್ಲಿ ಕೂಡಿಸಿ ನಗರ ಪ್ರದಕ್ಷಿಣೆ ಮಾಡಿಸಿ ಸನಿಹದಲ್ಲೇ ಗುಂಡಿಚಾ ಎಂಬಲ್ಲಿದ್ದ ಚಿಕ್ಕಮ್ಮನ ಮನೆಗೆ ಹೋಗಿ ಅಲ್ಲಿಯೇ ಏಳು ದಿನ ಇದ್ದು ವಾಪಸ್ಸು ಪುರಿಗೆ ಮರಳಿದರು. ಅಂದಿನಿಂದ ಇಲ್ಲಿ ರಥಯಾತ್ರೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಇನ್ನೊಂದು ಕಥೆಯ ಪ್ರಕಾರ ರಥಯಾತ್ರೆ ತನ್ನ ಮಾವ ದುಷ್ಟ ಕಂಸನನ್ನು ವಧಿಸಲು ಶ್ರೀಕೃಷ್ಣ ವೃಂದಾವನದಿಂದ ಮಥುರೆಗೆ ಪ್ರಯಾಣ ಬೆಳಸಿದ ಪ್ರತೀಕವಾಗಿ ಆಚರಿಸಲಾಗುತ್ತದೆ ಎನ್ನುತ್ತಾರೆ. ಮತ್ತೊಂದು ಕಥೆಯ ಪ್ರಕಾರ ಒಡಹುಟ್ಟಿದವರು ತೀವ್ರ ಜ್ವರದಿಂದ ಬಳಲಿದಾಗ ಅವರನ್ನು ಭೇಟಿಮಾಡಿ ಅರೈಕೆ ಮಾಡಲು ತನ್ನ ಮನೆಗೆ ಕರೆದುಕೊಂಡು ಹೋಗಲು ಅವರ ಚಿಕ್ಕಮ್ಮ ಬರುತ್ತಾಳೆ ಎಂಬ ಪ್ರತೀತಿ. ಮಗದೊಂದು ಕಥೆಯ ಪ್ರಕಾರ ಭಗವಾನ್ ಶ್ರೀಕೃಷ್ಣ ತನ್ನ ಭಕ್ತರೊಂದಿಗೆ ಬೆರೆಯಲು ಹೊರ ಬರುತ್ತಾನೆ ಎಂಬ ನಂಬಿಕೆಯಿದೆ. ಕಥೆಗಳು ಎನೇ ಇರಲಿ ದೈವ ಭಕ್ತರಿಗೆ ತಮ್ಮ ಭಕ್ತಿಯ ಪರಾಕಾಷ್ಟೆಯನ್ನು ತೋರಲು ಜಗದೋದ್ದಾರನನ್ನು ನೋಡಿ ಕಣ್ತುಂಬಿಕೊಳ್ಳಲು ಹಾಗೂ ರಥಯಾತ್ರೆಯಲ್ಲಿ ಸಂಭ್ರಮಿಸಲು ಇದೊಂದು ಸುಸಮಯ.
ಪ್ರತಿವರ್ಷದ ಆಷಾಢ ಮಾಸದ ಶುಕ್ಲ ಪಕ್ಷದ ಎರಡನೆ ದಿನ ಈ ಯಾತ್ರೆಯನ್ನು ನಡೆಸಲಾಗುತ್ತದೆ. ಜಗನ್ನಾಥ ತನ್ನ ಸಹೋದರ ಸಹೋದರಿಯರ ಜೊತೆ ಗುಂಡಿಚಾದಲ್ಲಿರುವ ತನ್ನ ಚಿಕ್ಕಮನ ಮನೆಗೆ ಹೋಗುತ್ತಾನೆಂಬ ಹಿನ್ನಲೆಯಲ್ಲಿ ನಡೆಸಲಾಗುವ ಯಾತ್ರೆ ಇದು. ಇಲ್ಲಿ ಚಿಕ್ಕಮ್ಮನ ಮನೆಯಲ್ಲಿ ಏಳು ದಿನ ಉಳಿದು ನಂತರ ಮತ್ತೆ ದೇವಸ್ಥಾನಕ್ಕೆ ವಾಪಾಸ್ಸಾಗುತ್ತಾನೆ ಎಂದು ಪ್ರತೀತಿ. ರಥಯಾತ್ರೆ ಹೊರಡುವ 14 ದಿನ ಹಿಂದೆ ಜೇಷ್ಠ ಪೂರ್ಣಿಮೆಯಂದು ಜಗನ್ನಾಥ ದೇವರಿಗೆ ಬಲಭದ್ರ ಸುಭದ್ರರಿಗೆ 108 ಕುಡಿಕೆಯ ಸ್ನಾನ ಮಾಡಿಸಲಾಗುತ್ತದೆ. ಇದಕ್ಕೆ ಬಳಸುವ ನೀರಿನ ಭಾವಿಯನ್ನು ವರ್ಷಕ್ಕೊಮ್ಮೆ ಮಾತ್ರ ತೆಗೆಯಲಾಗುತ್ತದೆ. ಈ ಸ್ನಾನದ ನಂತರ ಜಗನ್ನಾಥನಿಗೆ ಜ್ವರ ಬರುತ್ತದೆ ಎಂಬ ನಂಬಿಕೆಯಿದೆ. ಆಗ ಸ್ವಾಮಿಯು 14 ದಿನ ಏಕಾಂತದಲ್ಲಿರುತ್ತಾನೆ. 14 ದಿನ ಏಕಾಂತದಲ್ಲಿದ್ದು 15ನೇ ದಿನ ಭಕ್ತರಿಗೆ ದರ್ಶನ ಕೊಟ್ಟು ಮೂರು ಜನರು ಗುಂಡಿಚಾ ಕಡೆ ಹೊರಡುತ್ತಾರೆ.
ಜಗನ್ನಾಥನಿಗೆ ವಿಶೇಷತೆಗಳಿಂದ ಕೂಡಿದ ಭವ್ಯ ರಥ: ರಥಯಾತ್ರೆಗೆ ತಯಾರಾಗುವ ರಥ ಹಲವಾರು ವಿಶೇಷತೆಗಳಿಂದ ಕೂಡಿದೆ. ಈ ರಥಯಾತ್ರೆಗೆ ಪ್ರತಿವರ್ಷವೂ ಹೊಸ ರಥಗಳನ್ನೇ ಸಿದ್ಧಪಡಿಸಲಾಗುತ್ತದೆ. ಈ ರಥವನ್ನು ನಿರ್ಮಿಸಲು ಸುಮಾರು 2 ತಿಂಗಳು ಹಿಡಿಯುತ್ತದೆ. ಪ್ರತಿವರ್ಷದ ವೈಶಾಕ ಮಾಸದ ಅಕ್ಷಯ ತೃತೀಯಾದಿಂದ ರಥದ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯುತ್ತದೆ.
ಈ ರಥವನ್ನು ನಿರ್ಮಿಸಲೆಂದೇ ಮಂದಿರದಲ್ಲಿ ಸುಮಾರು 200ಕ್ಕಿಂತ ಹೆಚ್ಚು ಬಡಗಿಗಳು ರಾತ್ರಿ ಹಗಲೆನ್ನದೇ ರಥವನ್ನು ನಿರ್ಮಿಸುವ ಕೆಲಸದಲ್ಲಿ ತೊಡಗುತ್ತಾರೆ. ಪ್ರತಿವರ್ಷದ ವಸಂತ ಪಂಚಮಿಯಿಂದ ದಶಪಲ್ಲದ ಕಾಡುಗಳಲ್ಲಿ ರಥಕ್ಕೆ ಬೇಕಾದ ವಿಶೇಷವಾದ ಬೇವಿನ ಮರದ ಕಟ್ಟಿಗೆಗಳ ಸಂಗ್ರಹ ಕಾರ್ಯ ಪ್ರಾರಂಭವಾಗಿರುತ್ತದೆ. ಇಲ್ಲಿ ಮೂರು ದೇವರಿಗೂ ಮೂರು ವಿಶೇಷ ರಥಗಳನ್ನು ನಿರ್ಮಿಸಲಾಗುತ್ತದೆ. ಜಗನ್ನಾಥನನ್ನು ಕೂರಿಸುವ ರಥಕ್ಕೆ “ನಂದಿಘೋಷ” ಎಂದು ಹೆಸರು, ಇದಕ್ಕೆ 18 ಚಕ್ರಗಳಿದ್ದು ಸುಮಾರು 46.5 ಅಡಿ ಎತ್ತರವಿರುತ್ತದೆ. ಜಗನ್ನಾಥನ ರಥವು ಕೆಂಪು ಮತ್ತು ಹಳದಿ ಬಣ್ಣದಿಂದ ಕೂಡಿರುತ್ತದೆ. ಸುಬದ್ರೆಯನ್ನು ಕೂರಿಸುವ ರಥಕ್ಕೆ “ದ್ವಾರಪಾದಲನ” ಎನ್ನುತ್ತಾರೆ ಇದಕ್ಕೆ 14 ಚಕ್ರಗಳು, ರಥವು 44.6 ಅಡಿ ಎತ್ತರವಿದ್ದರೆ, ಬಲಭದ್ರನ ರಥಕ್ಕೆ “ತಳಧ್ವಜ” ಎಂದು ನಾಮಕರಣ ಮಾಡಲಾಗಿರುತ್ತದೆ. ಇದಕ್ಕೆ 16 ಚಕ್ರಗಳು ಹಾಗೂ 45 ಅಡಿ ಎತ್ತರವಿರುತ್ತದೆ. ಸಾಲಂಕೃತ ಗೊಂಡ ಈ ಮೂರು ಬೃಹತ್ ರಥಗಳಲ್ಲಿ ದೇವರುಗಳನ್ನು ಕೂರಿಸಿ ರಥಯಾತ್ರೆಯನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಈ ರಥ ತಯಾರಿಕೆಗೆ ಒಂದೇ ಒಂದು ಮೊಳೆಯನ್ನು ಬಳಸುವುದಿಲ್ಲ ಎಂಬುದು ವಿಶೇಷ. ಈ ಮೂರು ರಥಗಳಿಗೂ ಸುಮಾರು 50 ಮೀಟರ್ ಉದ್ದದ ದಪ್ಪ ಹಗ್ಗಗಳನ್ನು ಕಟ್ಟಾಲಾಗಿರುತ್ತದೆ. ರಥಯಾತ್ರೆಯಲ್ಲಿ ಭಾಗವಹಿಸುವುದರಿಂದ ಭಕ್ತರು ಆತ್ಮಸಾಕ್ಷಾತ್ಕಾರದ ಕಡೆ ಒಂದು ಹೆಜ್ಜೆ ಮುಂದಿಟ್ಟಂತಾಗುತ್ತದೆ ಎಂದೇ ಭಗವದ್ಭಕ್ತರು ನಂಬಿದ್ದಾರೆ.
ಚಿನ್ನದ ಪೊರಕೆಯಿಂದ ಮಾರ್ಗ ಸ್ವಚ್ಚ: ರಥಯಾತ್ರೆ ಹೊರಡುವುದಕ್ಕೆ ಮುಂಚೆ ಪುರಿಯ ರಾಜ ಗಜಪತಿಯು ಪಲ್ಲಕ್ಕಿಯಲ್ಲಿ ಆಗಮಿಸಿ ರಥವನ್ನು ಪೂಜಿಸುತ್ತಾನೆ. ಇದನ್ನು “ಚಾರ್ ಪಹನ್ರಾ” ಎಂದು ಕರೆಯುತ್ತಾರೆ. ನಂತರ ರಥ ಹೋಗುವ ಮಾರ್ಗವನ್ನು ಚಿನ್ನದ ಪೊರಕೆಯಿಂದ ಗುಡಿಸಲಾಗುತ್ತದೆ. ಹರಿಸೇವೆ ಮಾಡಲು ಈ ರಥಯಾತ್ರೆ ಹೇಳಿಮಾಡಿಸಿದ ಕಾಲ, ಬೃಹತ್ ರಥಗಳಿಗೆ ಕಟ್ಟಿರುವ ಹಗ್ಗಗಳನ್ನು ಎಳೆಯುವುದಿರಲಿ ಸ್ಪರ್ಷ ಮಾತ್ರದಿಂದಲೇ ಸಕಲ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ರಥಯಾತ್ರೆ ಸಾಗುವುದು ಕೇವಲ ಮೂರು ಕಿಲೋ ಮೀಟರ್ ಆದರೂ ಲಕ್ಷಾಂತರ ಭಕ್ತರು ಸೇರುವುದರಿಂದ ರಥಯಾತ್ರೆ ಸಾಗಲು ಹಲವು ಘಂಟೆಗಳೇ ಹಿಡಿಯುತ್ತದೆ. ಡಮರು ನಗಾರಿ ಶಂಕನಾದ ಯಾತ್ರೆಗೆ ಕಳೆ ಕಟ್ಟಿರುತ್ತದೆ. ಇಲ್ಲಿರುವ ಮೂರ್ತಿಗಳಿಗೆ ಕೈಕಾಲು ಮತ್ತು ಉಗುರುಗಳಿಲ್ಲ. ಹಿಂದೆ ವಿಶ್ವಕರ್ಮನು ಮೂರ್ತಿಗಳನ್ನು ಮಾಡುತ್ತಿದ್ದನು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ವಿಗ್ರಹ ಮಾಡುವಾಗ ಯಾರೂ ಕೋಣೆಗೆ ಬರಬಾರದು ಎಂದು ವಿಶ್ವಕರ್ಮ ಶರತ್ತು ವಿಧಿಸಿರುತ್ತಾನೆ. ಆದರೆ ಶರತ್ತನ್ನು ಮೀರಿ ರಾಜ ಕೊಣೆಯೊಳಗೆ ಪ್ರವೇಶಿಸಿದ್ದರಿಂದ ಕೋಪಗೊಂಡು ಅಪೂರ್ಣ ವಿಗ್ರಹವನ್ನು ಬಿಟ್ಟು ವಿಶ್ವಕರ್ಮ ಹೋದನೆಂದು ಪ್ರತೀತಿ. ಹಾಗಾಗಿಯೇ ಇಲ್ಲಿ ವಿಗ್ರಹಗಳನ್ನು ಅಪೂರ್ಣವಾಗಿಯೇ ಕೆತ್ತಲಾಗುತ್ತದೆ.
ಹೇರಾ ಪಂಚಮಿ: ರಥಯಾತ್ರೆಯ ಐದನೇ ದಿನವನ್ನು ಹೇರಾಪಂಚಮಿ ಎನ್ನುತ್ತಾರೆ. ರಥಯಾತ್ರೆಯ ಸಂದರ್ಭದಲ್ಲಿ ಜಗನ್ನಾಥ ಲಕ್ಷ್ಮಿಯನ್ನು ಬಿಟ್ಟುಹೋಗಿರುತ್ತಾನೆ. ಇದರಿಂದ ಕೋಪಗೊಂಡ ಲಕ್ಷ್ಮಿ ಸುವರ್ಣ ಲಕ್ಷಮಿಯಾಗಿ ಗುಂಡಿಚಾ ಮಂದಿರಕ್ಕೆ ಭೇಟಿ ನೀಡುತ್ತಾಳೆ. ಲಕ್ಷ್ಮಿಯನ್ನು ಕರೆದು ಜಗನ್ನಾಥನ ಮುಂದೆ ಕೂರಿಸಿ ಪೂಜಿಸುವುದನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಜಗನ್ನಾಥ ತನ್ನನ್ನು ಬಿಟ್ಟುಹೋದದಕ್ಕೆ ಕೋಪಗೊಂಡ ಲಕ್ಷ್ಮಿ ಜಗನ್ನಾಥನ ರಥ ನಂದಿಘೋಷದ ಒಂದು ಭಾಗವನ್ನು ಧ್ವಂಸಗೊಳಿಸುತ್ತಾಳೆ. ಈ ಪದ್ದತಿಯನ್ನು ಸಹ ರಥಯಾತ್ರೆಯ ಸಂದರ್ಭದಲ್ಲಿ ಆಚರಿಸುತ್ತಾರೆ. ಇದನ್ನು “ರಥಭಂಗಾ” ಎಂದು ಕರೆಯುತ್ತಾರೆ.
ಹೇರಾ ಪಂಚಮಿಯ ನಂತರ ಅಂದರೆ ಅಷ್ಠಮಿಯಂದು “ಸಾಂಧ್ಯಾ ದರ್ಶನ” ಇರುತ್ತದೆ. ಈ ದಿನ ಜಗನ್ನಾಥನ ದರ್ಶನ ಮಾಡುವುದರಿಂದ ಹತ್ತು ವರ್ಷಗಳ ಕಾಲ ಹರಿನಾಮ ಸ್ಮರಣೆ ಮಾಡಿದ ಪುಣ್ಯ ಪ್ರಾಪ್ರಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಆಷಾಡ ಶುಕ್ಲ ದಶಮಿಯಂದು ಅಂದರೆ ಒಂಭತ್ತನೆಯ ದಿನ ರಥಗಳು ಗುಂಡಿಚಾದಿಂದ ದೇವಸ್ಥಾನಕ್ಕೆ ಮರಳುತ್ತದೆ. ಇದನ್ನು “ಬಹುದಾ ಯಾತ್ರೆ” ಎನ್ನುತ್ತಾರೆ. ದೇವಸ್ಥಾನಕ್ಕೆ ಮರಳಿದ ಮೇಲೆ 10ನೇ ದಿನ ಜಗನ್ನಾಥ ತನ್ನ ಪರಿವಾರದವರೊಡನೆ ಕೂಡಿ ರಾಜ ರೂಪಿಯಾಗಿ ಭಕ್ತರಿಗೆ ದರ್ಶನ ಕೊಡುತ್ತಾನೆ. ಇದನ್ನು “ಸುನಬೇಷ” ಎಂದು ಕರೆಯುತ್ತಾರೆ. ಸುನ ಅಂದರೆ ಸುರ್ವರ್ಣ ಅಭರಣ ಹಾಗೂ ಭೇಷ ಎಂದ ವೇಷ, ಅಂದರೆ ಅಂದು ಚಿನ್ನದ ಅಭರಣಗಳಿಂದ ಅಲಂಕೃತನಾಗಿ ಭಕ್ತರಿಗೆ ದರ್ಶನ ಕೊಡುತ್ತಾನೆ.
ಭವ್ಯವಾದ ಬಣ್ಣ ಬಣ್ಣದಿಂದ ಕಂಗೊಳಿಸುವ ನೋಡಲು ದೇಗುಲದಂತೆ ಕಾಣುವ ರಥದಲ್ಲಿ ಕುಳಿತು ಹೊರಡುವ ಜಗನ್ನಾಥ, ಬಲಭದ್ರ ಸುಭದ್ರೆಯರನ್ನು ನೋಡಲು ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಜಗನ್ನಾಥನ ರಥವು ಮೊದಲು ಸಾಗುತ್ತದೆ, ನಂತರ ಬಲಭದ್ರ ಹಾಗೂ ಇದರ ಹಿಂದೆ ಸುಭದ್ರೆಯ ರಥ ಸಾಗುತ್ತದೆ. ಪುರಿಯಲ್ಲಿ 9 ದಿನಗಳ ಕಾಲ ದೈವಕಳೆ ಕಟ್ಟಿರುತ್ತದೆ. ಎಲ್ಲಿ ನೋಡಿದರೂ ಕೃಷ್ಣಭಕ್ತರು, ಡಮರು, ಶಂಕ ನಗಾರಿ ಭಜನೆಯ ಸದ್ದು ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಮೂರು ಕಿಲೋಮೀಟರ್ ವರೆಗೂ ರಸ್ತೆ ಕಾಣದಂತೆ ಭಕ್ತರು ಸೇರಿ ಜಗದ್ಧೋದ್ದಾರಕನ ಯಾತ್ರೆಯನ್ನು ಕಣುಂಬಿಕೊಂಡು ಪುನೀತರಾಗುತ್ತಾರೆ.
ಡಾ. ಪ್ರಕಾಶ್ ಕೆ ನಾಡಿಗ್