ನೀ ಬಿಟ್ಟು ಹೋದೆಯಾ?
ಹೊರಟಿರಾ
ಹೊರಡಲೇಬೇಕೇ
ಹೊರಟೇಬಿಟ್ಟಿರಾ…
ಹೊರಟು ಹೋಗುತ್ತಿರುವಿರಾ
ಎದ್ದು ಹೀಗೆ ಸೀದಾ
ತಿರುಗಿಯೂ ನೋಡದೇ
ಅಯ್ಯೋ!!! ಹೋಗೆಬಿಡುತ್ತಿದ್ದೀರಾ
ನೀವು ಹೊರಡುವ ಮೊದಲು
ನಾನು ನೀವು
ಜೊತೆಗಿದ್ದ ಆ ಕ್ಷಣಗಳು
ಬೊಗಸೆಯಲ್ಲಿ
ಹಿಡಿದುಕೊಂಡ ನೀರಿನಂತೆ
ಬಿಗಿಹಿಡಿಯಲು ಮುಷ್ಟಿ ಬಿಗಿದಷ್ಟೂ
ಸರಸರನೇ ಜಾರಿಹೋದವು
ಹೊರಡಲೇಬೇಕೆಂಬ
ಹಟದಲ್ಲೇ ಹತ್ತಿರಾಗಿದ್ದಿರಿ ನೀವು
ಹತ್ತಿರವಾದಷ್ಟೂ ಮನದಲ್ಲಿ
ನಿಮ್ಮ ಠಸ್ಸೆ ಒತ್ತಿದಿರಿ
ಹೋಗುತ್ತೇನೆ
ಹೋಗಿಯೇಬಿಡುತ್ತೇನೆ
ಎಂದೆಲ್ಲಾ ಹೇಳುತ್ತಲೇ
ಹೃದಯದ ತುಂಬೆಲ್ಲಾ ಆವರಿಸಿದಿರಿ
ಬುದ್ಧಿಯನ್ನಾಕ್ರಮಿಸಿದಿರಿ
ಕನಸುಗಳ ಬೀಜ ಬಿತ್ತಿದಿರಿ
ಹೊರಟೇಬಿಟ್ಟಿರುವಿರಿ ಈಗ
ನಿಮ್ಮನ್ನು ನಿಲ್ಲಿಸಿ ನಿಯಂತ್ರಿಸಿ
ನಿಮ್ಮ ಹೆಗಲೇರಲಾರೆ
ಹೇಳಿ ಹೋಗು ಕಾರಣವೆಂದು
ನಿಮ್ಮನ್ನು ಪೀಡಿಸಲಾರೆ
ಹಾಗೆಂದು ಮನದ ತುಂಬೆಲ್ಲಾ
ಬಿಡಿಸಿರುವ ನಿಮ್ಮ
ಚಿತ್ರಗಳನ್ನೂ ಅಳಿಸಲಾರೆ
ನೀವು ಬಿಟ್ಟುಹೋದ
ಬಳುವಳಿಯಾಗಿ ಕೊಟ್ಟುಹೋದ
ಕ್ಷಣಗಳ ನೆನಪುಗಳೆಲ್ಲವನೂ
ಮರೆಯದೇ ಮುದ್ದಿಸುತ್ತೇನೆ
ಪ್ರತಿರಾತ್ರಿ ಹಗಲೂ
ನಿಮ್ಮ ಮಾತುಗಳನ್ನೇ ಕನವರಿಸುತ್ತೇನೆ
ನಿಮ್ಮ ಕಲ್ಲೆದೆಯೂ ಕರಗಿ
ಮತ್ತೊಮ್ಮೆ ನನ್ನ
ಹೃದಯವನ್ನು ತೋಯಿಸಬಹುದೇ
ಕಾಯುತ್ತೇನೆ!
ಸೌಜನ್ಯ ದತ್ತರಾಜ