ನೇತಾಜಿ ನಿಗೂಢ ಕಣ್ಮರೆ!!!!
ನಮಗೆಲ್ಲರಿಗೂ ತಿಳಿದರುವ ಪ್ರಕಾರ ನಮ್ಮ ದೇಶಕ್ಕೆ ಆಗಸ್ಟ್ 15 ರ 1947 ರಲ್ಲಿ ಸ್ವಾತಂತ್ರ‍್ಯ ಸಿಕ್ಕಿತು. ಆದರೆ ಇದಕ್ಕೂ ಸುಮಾರು ನಾಲ್ಕು ವರ್ಷಗಳ ಮೊದಲೇ ಬ್ರಿಟಿಷರಿಗೆ ಸಡ್ಡು ಹೊಡೆದಿದ್ದ ನೇತಾಜಿಯು ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ‍್ಯ ಘೋಷಿಸಿ ತಮ್ಮ ನೇತೃತ್ವದಲ್ಲಿ ಸರ್ಕಾರವನ್ನೂ ರಚಿಸಿದ್ದರು. 1943 ಡಿಸೆಂಬರ್ 29 ರಂದು ಅಂಡಮಾನ್ ನಿಕೋಬಾರಿನಲ್ಲಿ ನೇತಾಜಿಯು ಪ್ರಾಂತೀಯ ಸರ್ಕಾರ ರಚಿಸುವ ಮೂಲಕ ಇತಿಹಾಸವನ್ನು ಬರೆದಿದ್ದರು. ಜೊತೆಗೆ ಡಿ.30 ರಂದು ಪೋರ್ಟ್ ಬ್ಲೇರ್‌ನ ಜಿಮ್ಖಾನಾ ಮೈದಾನದಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯ (Iಓಂ) ತ್ರಿವರ್ಣ ಧ್ವಜವನ್ನೂ ಹಾರಿಸಿದ್ದರು. ಅದೇ ವೇಳೆಗೆ ಈ ಅವಳಿ ದ್ವೀಪಗಳಿಗೆ ‘ಹುತಾತ್ಮ’ ಮತ್ತು ‘ಸ್ವರಾಜ್’ ಎಂದು ಮರುನಾಮಕರಣವನ್ನು ಸಹ ಮಾಡಿದ್ದರು.

ಈ ಪ್ರಾಂತೀಯ ಸರ್ಕಾರಕ್ಕೆ ನೇತಾಜಿಯೇ ಮುಖ್ಯಸ್ಥರಾಗಿದ್ದರು. ಈ ಸರಕಾರಕ್ಕೆ ಲೆ.ಕ ಎ.ಡಿ ಲೋಕನಾಥನ್ ಅವರು ರಾಜ್ಯಪಾಲರಾಗಿ ಆಯ್ಕೆಯಾಗಿದ್ದರು. ಈ ಸರ್ಕಾರದ ಜೊತೆಗೆ ಜರ್ಮನಿ, ಜಪಾನ್, ಇಟಲಿ, ಕ್ರೊವೇಶಿಯಾ, ವಾಂಗ್ ಜಿಂಗ್ವಿ, ಥಾಯ್ಲೆಂಡ್, ಭರ್ಮಾ, ಮ್ಯಾಂಚುಕುವಾ, ಫಿಲಿಪಿನ್ಸ್ ಸೇರಿದಂತೆ ಒಂಬತ್ತು ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧವನ್ನು ಹೊಂದಿದ್ದವು. ಈ ವೇಳೆ ನೂತನ ಸರ್ಕಾರ ರಚಿಸಿದ್ದ ಆಗಿನ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರಿಗೆ ಐರ್ಲೆಂಡ್ ಸೇರಿದಂತೆ ಹಲವು ದೇಶಗಳು ಅಭಿನಂದನೆ ಸಲ್ಲಿಸಿದ್ದವು. ಬ್ರಿಟೀಷರ ದಾಸ್ಯದಲ್ಲಿದ್ದ ನಮ್ಮ ದೇಶಕ್ಕೆ ಸ್ವಾತಂತ್ರ‍್ಯವನ್ನು ಒದಗಿಸಲು ಕೇವಲ ಗಾಂಧೀಜಿ ಅವರು ಅನುಸರಿಸಿದ್ದ ಅಹಿಂಸಾತ್ಮಕ ಹೋರಾಟ ಮಾತ್ರ ಸಾಕಾಗುವುದಿಲ್ಲ, ಕ್ರಾಂತಿಕಾರಿ ಧೋರಣೆಯೂ ಅಗತ್ಯವಿದೆ ಎಂದು ನೇತಾಜಿ ನಂಬಿದ್ದರು.

15 ಆಗಸ್ಟ್ 1945ರಂದು ಜಪಾನ್ ದೇಶವು ಎರಡನೇ ಮಹಾಯುದ್ಧದಲ್ಲಿ ಸಂಯುಕ್ತ ರಾಷ್ಟ್ರಗಳ ಒಕ್ಕೂಟಕ್ಕೆ ಶರಣಾಗುವ ಮೂಲಕ ಎರಡನೇ ಮಹಾಯುದ್ಧ ಅಂತ್ಯಗೊಂಡಿತು. ಆ ಸಮಯದಲ್ಲಿ ಸಿಂಗಾಪುರದಲ್ಲಿದ್ದ ತನ್ನ ಇಂಡಿಯನ್ ನ್ಯಾಷನಲ್ ಆರ್ಮಿಯ ಕಛೇರಿಯಿಂದ ಬೋಸ್ ತನ್ನ ಕೆಲವು ಆಪ್ತರೊಂದಿಗೆ ವಿಯೆಟ್ನಾಂ ದೇಶದ ಹೋಚಿಮಿನ್ ವಿಮಾನ ನಿಲ್ದಾಣಕ್ಕೆ ತೆರಳಿದರು. ಬೋಸ್ ರೊಂದಿಗೆ ಜಪಾನ್ ಮಿಲಿಟರಿಯ ಲೆಫ್ಟಿನೆಂಟ್ ಜನರಲ್ ಸುನಮಾಸ ಶೆಡೈ ಕೂಡ ಇದ್ದರು. ದ್ವಿತೀಯ ಮಹಾಯುದ್ಧದಲ್ಲಿ ತನ್ನ ದೇಶದ ಶರಣಾಗತಿಯಿಂದ ಅತೀವ ವಿಚಲಿತರಾಗಿದ್ದ ಶೆಡೈ ಮತ್ತು ಈ ಸೋಲಿನಿಂದ ಭಾರತಕ್ಕೆ ಸ್ವಾತಂತ್ರ‍್ಯ ಕೊಡಿಸಲು ಖುದ್ದು ರಚಿಸಿದ್ದ ಸೇನೆ ಆಜಾದ್ ಹಿಂದ್ ಫೌಜಿನ ಮುಂದಿನ ದಿನಗಳ ಬಗ್ಗೆ ಚಿಂತಿತರಾಗಿದ್ದ ಬೋಸ್ ಇಬ್ಬರೂ ಅಂದು ಅದೇ ಪಟ್ಟಣದಲ್ಲಿ ವಿರಮಿಸಿದ್ದರು.
ಆಗಸ್ಟ್ 18 ರಂದು ಅಲ್ಲೇ ಇದ್ದ ನೇತಾಜಿಯ ಪರಮಾಪ್ತ ಮಿತ್ರ ತಮಿಳುನಾಡಿನ ಲಿಯೋನ್ ಪೋಚಂಡಿ ಅವರು ಭೋಸ್ ಮತ್ತು ಜಪಾನ್ ಲೆ.ಜನರಲ್ ಶೆಡೈರನ್ನು ಹೋಚಿಮಿನ್ ಸಿಟಿ ವಿಮಾನ ನಿಲ್ದಾಣದಿಂದ ಬೀಳ್ಕೊಟ್ಟಿದ್ದರು ಎಂದು ದಾಖಲೆಗಳು ಹೇಳುತ್ತವೆ. ಆದರೆ ಅವರಿಬ್ಬರೂ ಎಲ್ಲಿಗೆ ಪ್ರಯಾಣಿಸಿದ್ದರೆನ್ನುವುದು ಇದುವರೆಗೂ ಅವರಿಬ್ಬರನ್ನು ಬಿಟ್ಟರೆ ಬೇರೆ ಯಾರಿಗೂ ತಿಳಿದಿಲ್ಲ. ಇದರ ನಂತರ ಒಂದು ವಾರ ಕಳೆದು ಆಗಸ್ಟ್ 18 1945ರಂದು ತೈವಾನ್ ದೇಶದ ತೈಹೊಕ್ ವಿಮಾನ ದುರ್ಘಟನೆಯಲ್ಲಿ ನೇತಾಜಿ ಸಾವನ್ನಪ್ಪಿದ್ದಾರೆ ಎಂಬ ಶಾಕಿಂಗ್ ಸುದ್ಧಿ ವಿಶ್ವಕ್ಕೇ ಬಿತ್ತರವಾಗಿತ್ತು.

ಮೊದಲಿಗೆ ಈ ದುರ್ಘಟನೆಯ ತನಿಖೆಯನ್ನು ನಡೆಸಿದ ಅಮೆರಿಕಾದ ಸಂಸ್ಥೆಯು ದುರ್ಘಟನೆ ನಡೆದಿದೆ ಎಂದು ಹೇಳಲಾದ ದಿನದಂದು ತೈವಾನಿನಲ್ಲಿ ಯಾವುದೇ ವಿಮಾನ ಅಪಘಾತ ನಡೆದಿಲ್ಲ ಎಂದು ಷರಾ ಬರೆದಿತ್ತು. ಭೋಸರನ್ನು ಕೊನೆಗಾಣಿಸಲು ಕಾಯುತ್ತಿದ್ದ ಬ್ರಿಟಿಷರು ಈ ದುರ್ಘಟನೆಯನ್ನು ಜಾಲಾಡಿದರೂ ಅವರಿಗೂ ಯಾವುದೇ ಸ್ಪಷ್ಟತೆಯು ಸಿಗಲಿಲ್ಲ. ನಂತರ ಭಾರತ ಸರ್ಕಾರವೂ ಶಾಹ್ ನವಾಜ್ ಕಮಿಟಿಯನ್ನು ರಚಿಸಿಸಲಾದರೂ ಈ ತನಿಖಾ ಕಮಿಟಿಯು ಕುಳಿತಲ್ಲೇ ಹೌದು ಜಪಾನ್ ದೇಶ ನೀಡಿದ ವರದಿಯ ಪ್ರಕಾರವೇ ಅಂದರೆ ವಿಮಾನ ಅವಘಡದಲ್ಲೇ ನೇತಾಜಿ ಸಾವನ್ನಪ್ಪಿದ್ದಾರೆ ಎಂದು ವರದಿಯೊಂದನ್ನು ತಯಾರಿಸಿ ಷರಾ ಬರೆದು ಕೈತೊಳೆದುಕೊಂಡರೂ ಭಾರತೀಯರು ಈ ವರದಿಯ ಸಾರವನ್ನು ಒಪ್ಪಲೇ ಇಲ್ಲ. ದುರ್ಘಟನೆ ನಡೆದು ಮೂವತ್ತು ವರ್ಷಗಳ ನಂತರ 1974ರಲ್ಲಿ ಸರಕಾರದಿಂದ ರಚಿಸಲಾದ ಖೋಸ್ಮಾ ಕಮಿಷನ್ ಎಂಬ ಮತ್ತೊಂದು ತನಿಖಾ ತಂಡವು ವರದಿಗಾಗಿ ವರದಿಯನ್ನು ತಯಾರಿಸಿ ಅದರಲ್ಲಿ ವೈಮಾನಿಕ ದುರಂತದಲ್ಲೇ ಭೋಸ್‌ರು ಸತ್ತಿರುವುದು ನಿಜವೆಂದು ಹೇಳಿ ಸುಮ್ಮನಾಯಿತು. ಈ ಘಟನೆ ನಡೆದಿದೆ ಎಂದು ತಿಳಿದು ಎಪ್ಪತ್ತೇಳು ವರ್ಷಗಳೇ ಕಳೆದಿದ್ದರೂ ನೇತಾಜಿಯ ಕಣ್ಮರೆ ಇಂದಿಗೂ ನಿಗೂಢವಾಗಿಯೇ ಉಳಿದರುವುದು ವಿಷಾಧನೀಯ. ಎಲ್ಲದರಲ್ಲೂ ಶಿಸ್ತಿನ ಸಿಪಾಯಿಯೆಂದು ಕರೆಯಲ್ಪಡುವ ಜಪಾನ್ ಸರಕಾರ ಈ ಘಟನೆಯ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡದಿರುವುದೂ ದುರಂತವೇ. ಎರಡನೇ ಮಹಾಯುದ್ಧದ ಶರಣಾಗತಿ ಒಪ್ಪಂದದ ಪ್ರಕಾರ ಜಪಾನ್ ದೇಶವು ತೈವಾನನ್ನು ಸಂಪೂರ್ಣವಾಗಿ ತೆರವು ಮಾಡಿ ಚೀನಾಕ್ಕೆ ಹಸ್ತಾಂತರಿಸಿತು. ಅದಕ್ಕೂ ಮುನ್ನ ನೇತಾಜಿಯ ಅಂತಿಮ ವಿಧಿಯನ್ನು ನಡೆಸಿ ಅವರ ಜಿತಾಭಸ್ಮ ಇದ್ದ ಮಡಿಕೆಯನ್ನು ಟೋಕಿಯೋದ ರನ್ಮೋಜಿ ಮಂದಿರದಲ್ಲಿ ಇಟ್ಟಿತ್ತು. ಇಂದಿಗೂ ಅವರ ಚಿತಾಭಸ್ಮ ಅಲ್ಲಿಯೇ ಇದೆ ಎನ್ನಲಾಗುತ್ತಿದೆ.

ನೇತಾಜಿ ವಿಮಾನ ಪತನವಾಗಿ ಮರಣಿಸಿಲ್ಲ, ಟೋಕಿಯೋದ ರನ್ಮೋಜಿ ಮಂದಿರದಲ್ಲಿ ಇರುವುದು ಅವರ ಚಿತಾ ಭಸ್ಮವೇ ಅಲ್ಲ, ಅದರ ವಂಶವಾಹಿನಿಯ ಪರೀಕ್ಷೆ ಆಗಬೇಕು ಎಂದು ಭೋಸ್‌ರ ಕುಟುಂಬಸ್ಥರು ಮತ್ತು ಭಾರತೀಯರ ಒತ್ತಡ ಹೆಚ್ಚುತ್ತಾ ಇದ್ದಂತೆ ಜಸ್ಟೀಸ್ ಮುಖರ್ಜಿಯವರ ನೇತೃತ್ವದಲ್ಲಿ ಮತ್ತೊಂದು ತನಿಖಾ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಐದು ವರ್ಷಗಳ ಕಾಲ ವಿಚಾರಣೆ ನಡೆಸಿ 2005 ರಲ್ಲಿ ವರದಿಯನ್ನು ಸಲ್ಲಿಸಿತು. ಆ ವರದಿಯಲ್ಲಿ, ತೈಹೊಕುವಿನಲ್ಲಿ 18 ಆಗಸ್ಟ್ 1945 ರಂದು ಯಾವ ವಿಮಾನವೂ ಪತನವಾಗಿಲ್ಲ, ಆದ್ದರಿಂದ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿದ್ದಾರೆ ಎನ್ನುವುದು ಸುಳ್ಳು ಹಾಗೂ ಟೋಕಿಯೋದ ಮಂದಿರದಲ್ಲಿ ಇರುವುದು ಭೋಸರ ಚಿತಾಭಸ್ಮವಲ್ಲ ಎಂದು ಹೇಳಿತು. ಭೋಸರು ಈ ಅಪಘಾತದಲ್ಲಿ ಸತ್ತಿಲ್ಲ ಎಂದಾದರೆ ಅವರೆಲ್ಲಿ ಹೋದರು, ಎಲ್ಲಿಯವರೆಗೆ ಅವರು ಬದುಕಿದ್ದರು ಎನ್ನುವ ಖಚಿತ ಮಾಹಿತಿ ಇಂದಿಗೂ ಲಭ್ಯವಿಲ್ಲ.
ನೇತಾಜಿ ಕಣ್ಮರೆಯ ಹಿಂದೆ ನಿಗೂಢ ವ್ಯಕ್ತಿಗಳ ಕೈವಾಡವಿರುವುದು ಭೋಸರ ಕಣ್ಮರೆಯ ವಿಷಯಕ್ಕೆ ಸಂಬಂಧಿತ ಕಡತಗಳು ಇದ್ದಕ್ಕಿದ್ದಂತೆ ಕಾಣೆಯಾಗುತ್ತಿದ್ದುದರಿಂದ ಈ ತನಿಖಾಧಿಕಾರಿಗಳಿಗೆ ಖಚಿತವಾಗಿತ್ತು. ವಿಮಾನ ಅಪಘಾತದ ಕಥೆಯನ್ನು ಕಟ್ಟಿ ಭೋಸರನ್ನು ಗೌಪ್ಯವಾಗಿ ಅಂದಿನ ಸೋವಿಯತ್ ರಷ್ಯಾಗೆ ಕಳುಹಿಸಲಾಗಿತ್ತು ಎನ್ನುವ ಗುಮಾನಿಯೂ ಇದೆ. ಭೋಸರು ಬದುಕಿದ್ದರೆ ಭಾರತದ ಸ್ವಾತಂತ್ರದ ನಂತರವಾದರೂ ದೇಶಕ್ಕೆ ಬರುತ್ತಿದ್ದರು, ಆದರೆ ಬರಲೇ ಇಲ್ಲ ಯಾಕೆ? ಅಥವಾ ಗೌಪ್ಯವಾಗಿ ಭಾರತಕ್ಕೆ ಬಂದು ಇಲ್ಲೇ ನೆಲೆಸಿದ್ದರೇ ಎನ್ನುವ ಅನುಮಾನವೂ ಇದೆ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160