ಪರಿಸ್ಥಿತಿ
ಕೆಲವೊಮ್ಮೆ ಪರಿಸ್ಥಿತಿಯ
ಅತಿರೇಕಗಳು ಹೇಗಿರುತ್ತವೆಂದರೆ
ಚಕ್ರವ್ಯೂಹದಲಿ ಸಿಲುಕಿದ್ದ
ಅಭಿಮನ್ಯುವಿನ ಸ್ಥಿತಿಯಂತೆ
ಉಸಿರುಕಟ್ಟಿಸುವಳತೆಯ
ಚೌಕದೊಳಗೆ ಸಿಲುಕಿದವಗೆ
ಚುಚ್ಚುವೀಟಿಗಳ ಗತಿಯಂತೆ
ಅಸುವುಳಿಸಿಕೊಳುವ
ಕೆಸುವ ಕೈಬಿಡದೆ ಕಾಪಿಡುತ
ಹೋರಾಡಲೇ ಬೇಕು
ಬದುಕ ರಣರಂಗದಲಿ
ಸಿಡಿದೇಳಲೇ ಬೇಕು
ಬೆಂಕಿಗೆ ಬಿದ್ದ ಸಾಸಿವೆಯಂತೆ
ಪೊರೆ ಕಳಚಿ ಹೊಸ ರೂಪ ಪಡೆವಂತೆ
ಬದುಕೆಂಬ ಬಯಲುದಾರಿ
ಹರಿವ ಹರಿವಿನಲ್ಲಿ
ಹರಿ ನಾಮಸ್ಮರಣೆಯಲ್ಲಿ
ಕಿರಿಕಿರಿಗಳ ಮರೆತು
ಕಿರುನಗೆಯ ಹೊತ್ತು
ಸಾಗಿಸಬೇಕಿದೆ ದಾರಿ
ಸೋಲೊಪ್ಪದೇ ಬೇಸತ್ತು

ಸೌಜನ್ಯ ದತ್ತರಾಜ