ಬದುಕಿನ ಲೆಕ್ಕಾಚಾರ
At the end of the day, ನಾನೊಮ್ಮೆ ನನ್ನ ಬದುಕನ್ನ ಹಿಂತಿರುಗಿ ನೋಡಿದಾಗ ನನಗೆ ಎಷ್ಟು ಪಾಪ ಪ್ರಜ್ಞೆ ಕಾಡುತ್ತದೆ, ಮತ್ತು ಯಾಕೆ ಕಾಡುತ್ತದೆ. ನಾನೆಷ್ಟು ಬಾರಿ ನಿಜವಾಗಿಯೂ ಬದುಕಿದ್ದೆ, ಮತ್ತು ಹೇಗೆ? ನಾನು ಹೀಗೆ ಮಾಡಬಾರದಿತ್ತ? ಅಥವಾ ಇಲ್ಲ ನಾನು ಮಾಡಿದ್ದು ಸರಿಯಾಗಿಯೆ ಇತ್ತು! ಹೀಗೆ ಎಷ್ಟೊ ಲೆಕ್ಕಾಚಾರಗಳು ಕಣ್ಣೆದುರು ಬಂದು ನಿಂತುಬಿಡಬಹುದು. ಕೆಲವು ವಿಚಾರಗಳು ಕಾಡಬಹುದು, ಕೆಲವೊಂದು ಮನಸ್ಸಿಗೆ ಹತ್ತಿರವೆನಿಸಬಹುದು, ಹಲವು ಕಾಡುವ ಪಾತ್ರಗಳು ಜೀವನದಲ್ಲಿ ಬಂದು ಹೋಗಿರಬಹುದು, ಇದೆಲ್ಲದರ ಹೊರತಾಗಿಯೂ, ನನ್ನ ಬದುಕು ನನಗೆ ತೃಪ್ತಿ ಕೊಟ್ಟಿದೆ ಎನ್ನಿಸಿದರೆ ಅದು ನಾನು ನಿಜವಾಗಿಯೂ ಬದುಕಿದ ಬದುಕು ಎಂದರ್ಥ!
ಯಾರ ಬದುಕಿನ ಗುಣಮಟ್ಟ ಕೂಡಾ ಅವರೆಷ್ಟು ಹಣ ಗುಡ್ಡೆ ಹಾಕಿದ್ದಾರೆ, ಅವರ ಬಳಿ ಎಷ್ಟು ಮನೆಗಳು, ಕಾರುಗಳು, ಚೆಂದದ ಬಟ್ಟೆಗಳು, ಮೆಟ್ಟೋ ಚಪ್ಪಲಿಗಳು, ತಿನ್ನೋ ಅಗುಳು, ಕುಡಿಯೊ ಚಹಾದಿಂದ ನಿರ್ಧಾರ ಆಗುವುದಿಲ್ಲ ಅಥವಾ ಯಾವ ಜ್ಯೋತಿಷಿಯ ಕಣ್ಣಳತೆಗೆ ಸಿಗುವ ಅಂಗೈನ ರೇಖೆಗಳಿಂದ ಬದಲಾಗೋದಿಲ್ಲ. Infact ಕೈ ಇಲ್ಲದವನಿಗೂ ಭವಿಷ್ಯವಿದೆ. ಬೀದಿ ಬದಿಯ ತಳ್ಳುಗಾಡಿಯ ಅಂಗಡಿಯಲ್ಲಿ ಕುಳಿತು ಚಹಾ ಕುಡಿಯುವವನು, ಯಾವುದೋ Ac ರೂಮಿರುವ ಕೆಫೆ ಯಲ್ಲಿ ಕುಳಿತು ಕಾಫೀ ಕುಡಿಯುವವನಿಗಿಂತ ನೆಮ್ಮದಿಯಾಗಿಯೆ ಜೀವಿಸುತ್ತಿರುತ್ತಾನೆ. ಚಪ್ಪಲಿ ಹೊಲಿಯುವವನು ತಾನು ನಿಯತ್ತಿನಿಂದ ದುಡಿದ ಹಣವನ್ನು ತುತ್ತಿನ ಚೀಲಕ್ಕೆ ತುಂಬಿಸಿಕೊಂಡೆ ಎಂದು ಮನೆಯ ಜಗುಲಿಯಲ್ಲಿ ಕುಳಿತು, ಸೂರು ದಿಟ್ಟಿಸುತ್ತ ನಿಟ್ಟುಸಿರು ಬಿಟ್ಟಿರುತ್ತಾನೆ. ಗುಡಿಸಿಲಿನಲ್ಲಿ ಮಂದವಾಗಿ ಉರಿವ ದೀಪದ ಬೆಳಕಿನಲ್ಲಿ ಓದುವ ಮಗುವು ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಮಗುವಿಗಿಂತ ಚುರುಕಾಗಿಯೇ ಇರುತ್ತದೆ. ಅಡ್ನಾಡಿ ಬದುಕಿನ ಅಡ್ಡದಾರಿಗಳು ಕೆಲವೊಮ್ಮೆ ಅರ್ಥ ಆಗದೆ ಇರಬಹುದು.
ಅದೃಷ್ಟ ಯಾವಾಗ ಯಾರ ಕೈ ಬೇಕಾದರು ಹಿಡಿಯಬಹುದು ಅಥವಾ ಯಾರಿಗೆ ಬೇಕಾದರು ಕೈ ಕೊಡಬಹುದು. ಅವಕಾಶಗಳು ಎಲ್ಲರಿಗೂ ಹುಡುಕಿಕೊಂಡು ಬರದೆ ಇರಬಹುದು. ಆದರೆ ಅವಕಾಶಗಳನ್ನ ಸೃಷ್ಟಿಸಿಕೊಂಡು ಬದುಕು ಕಟ್ಟಿಕೊಂಡವರು ನಮ್ಮ ನಿಮ್ಮ ನಡುವೆಯೆ ಅನೇಕರಿದ್ದಾರೆ. ಹಣವನ್ನು ಯಾರು ಬೇಕಾದರೂ ಅಥವಾ ಹೇಗೆ ಬೇಕಾದರೂ ಸಂಪಾದಿಸಬಹುದು. ಆದರೆ ಹಾಗೆ ಸಂಪಾದಿಸಿದ್ದು ಪಾಪ ಪ್ರಜ್ಜ್ಞೆಯ ಕೂಪಕ್ಕೆ ನಮ್ಮನ್ನು ತಳ್ಳದೇ ಇದ್ದರೆ, ಅಲ್ಲಿ ನಾವು ನಿಜವಾಗಿಯೂ ನಿಯತ್ತಾಗಿ ಸಂಪಾದಿಸಿದ್ದೇವೆ ಎಂಬ ಶಾಂತ ಅಲೆಯೊಂದು ಹುಟ್ಟುತ್ತದೆ. ಅದೇ ಮುಂದೊಮ್ಮೆ ಬದುಕು ಏನೆಂದು ಅರ್ಥೈಸಲೂಬಹುದು..!
Whatever it is… ನಮ್ಮ ಬದುಕನ್ನೊಮ್ಮೆ ನಾವು ಹಿಂತಿರುಗಿ ನೋಡಿದಾಗ, ನಾವು ಏನೆಲ್ಲಾ ಗಳಿಸಿದ್ದೇವೊ ಅಥವಾ ಕಳೆದುಕೊಂಡಿದ್ದೇವೊ ಅದು ನಮ್ಮ ಆತ್ಮಸಾಕ್ಷಿಗೆ ಬಗಲ ಮುಳ್ಳಾಗಿ ಕಾಡದೆ ಇದ್ದರೆ ಅಂದು ನಿಜವಾಗಿಯೂ ಈ ಬದುಕು ಸಾರ್ಥಕತೆ ಪಡೆದುಕೊಂಡ ದಿನ. ಮುಕ್ತಿಗೊಂದಿಷ್ಟು ಜ್ಞಾನ, ಸತ್ತಾಗ ಹೊರೊಕೆ ನಾಲ್ಕು ಜನ, ತೀರಿಸಿಹೋಗುವ ಕರ್ಮದ ಋಣ ಇದೆಲ್ಲದರ ಅಖೈರು ಮೊತ್ತವೆ ಜೀವನ..! ಎಲ್ಲರಿಗೂ ಇಂತದ್ದೊಂದು ಹಿಂತಿರುಗಿ ನೋಡುವ ದಿನ ಬರಲಿ, ಆ ದಿನ ಮೊಗದಲ್ಲೊಂದು ಮಂದಹಾಸ ಮೂಡುವಂತ ಮಿಂಚೊಂದು ಬೆಳಗಲಿ.

ಪಲ್ಲವಿ ಚೆನ್ನಬಸಪ್ಪ