ಬಹುಮುಖ ಪ್ರತಿಭೆಯ ಖನಿ ಶೋಭಿತಾ ತೀರ್ಥಹಳ್ಳಿ
ಪ್ರತಿಭೆಯು ಎಲ್ಲರಲ್ಲೂ ಇರುತ್ತದೆ. ಆದರೆ ಆ ಪ್ರತಿಭೆಯನ್ನು ಒರೆಗೆ ಹಚ್ಚಿ ಅದನ್ನು ತಿದ್ದಿ ತೀಡಿ ಪ್ರದರ್ಶನಕ್ಕೆ ಇಡುವವರು ಕೆಲವೇ ಮಂದಿ ಮಾತ್ರ. ಹೆಚ್ಚಿನ ಪ್ರತಿಭೆಗಳು ಕೇವಲ ಒಂದೆರಡು ಕಲೆಗಳಿಗಷ್ಟೇ ಸೀಮಿತವಾಗಿರುತ್ತಾರೆ. ಆದರೆ ಇಲ್ಲೊಬ್ಬ ಹುಡುಗಿ ವೈವಿಧ್ಯಮಯವಾದ ಪ್ರತಿಭೆಗಳನ್ನು ಹೊಂದಿದ್ದಾಳೆ, ಆಕೆಯ ಹೆಸರು ಶೋಭಿತಾ ತೀರ್ಥಹಳ್ಳಿ.

ಈಕೆ ಬರೋಬ್ಬರಿ ಹದಿನೈದು ಕಲೆಗಳನ್ನು ತನ್ನೊಳಗೆ ಕರಗತ ಮಾಡಿಕೊಂಡಿದ್ದಾಳೆ ಎಂದರೆ ನಂಬಲೇಬೇಕು. ಈಕೆಯು ಮೂಲತಃ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬೆಜ್ಜವಳ್ಳಿಯವರು. ಈಕೆಯ ತಂದೆ ಉದಯ, ತಾಯಿ ಉಷಾ, ಮತ್ತು ತಮ್ಮ ಗಣೇಶ ಹೀಗೆ ಇವರದ್ದು ಪುಟ್ಟ ಸಂಸಾರ. ಈಕೆಗೆ ಎರಡನೆಯ ಅಮ್ಮನಂತೆ ನಿವೃತ್ತ ಕನ್ನಡ ಅಧ್ಯಾಪಕಿ ಚಂಪಕಮಲಾ ನಾಗೇಶ್ ಇವರೆಲ್ಲಾ ಕಲೆಗಳಿಗೂ ಬೆಂಬಲ ನೀಡಿ ಸ್ಪೂರ್ತಿಯಾಗಿದ್ದಾರೆ. ಏಕೆಂದರೆ ಇವರು ಬಾಲ್ಯದಿಂದಲೂ ಚಂಪಕಮಾಲಾ ಅವರ ಸಂಪರ್ಕದಲ್ಲೇ ಬೆಳೆದು, ವಿದ್ಯಾಭ್ಯಾಸ ಹಾಗೂ ಕಲೆಗಳನ್ನು ಕಲಿತಿದ್ದರಿಂದ ಅವರೇ ತನ್ನ ಸಾಧನೆಗೆ ಕಾರಣವೆನ್ನುತ್ತಾರೆ ಶೋಭಿತಾ.
ಶೋಭಿತಾ ಸಾಹಿತ್ಯ ಪರಿಷತ್ತಿನಲ್ಲಿ ಕವನವಾಚನ, ವಾಲ್ ಆರ್ಟ್, ನೃತ್ಯ ತರಗತಿ, ಚಿತ್ರಕಲೆ ತರಗತಿಗಳನ್ನ ನಡೆಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಶೋಭಿತಾ ಒಬ್ಬರು ಅತ್ಯುತ್ತಮ ಕ್ಲಾಸಿಕಲ್ ನೃತ್ಯಗಾರ್ತಿ. ತನ್ನ 3ನೇ ತರಗತಿಯಲ್ಲಿ ನೃತ್ಯವನ್ನು ಕಲಿಯಲು ಪ್ರಾರಂಭಿಸಿದ್ದು, ಅದಕ್ಕೂ ಮೊದಲೇ ಗಣೇಶ ಚತುರ್ಥಿ, ರೋಟರಿ ಕಾರ್ಯಕ್ರಮಗಳಲ್ಲಿ ಇವರ ಹೆತ್ತವರು ನೃತ್ಯ ಮತ್ತು ಹಾಡು ಹಾಡಿಸುತ್ತಿದ್ದರು. 3ನೇ ತರಗತಿಯ ಒಂದು ಚಿತ್ರ ಸ್ಪರ್ಧೆಯಲ್ಲಿ ಬಹುಮಾನವನ್ನು ಪಡೆದು, ಆ ಚಿತ್ರವು ಮಯೂರ ಮಾಸಪತ್ರಿಕೆಯಲ್ಲೂ ಪ್ರಕಟಗೊಂಡಿತ್ತು.
ಇವರು ಓದಿದ್ದು ಸಹ್ಯಾದ್ರಿ ಪಾಲಿಟೆಕ್ನಿಕ್ ತೀರ್ಥಹಳ್ಳಿಯಲ್ಲಿ ಎಲೆಕ್ಟ್ರಿಕಲ್ ಡಿಪ್ಲೋಮೋ ಆದರೂ ಇವರನ್ನು ಕೈಬೀಸಿ ಕರೆದದ್ದು ಕಲಾಕ್ಷೇತ್ರ. ಭರತನಾಟ್ಯವನ್ನು ತೀರ್ಥಹಳ್ಳಿಯ ರಾಜರಾಜೇಶ್ವರಿ ನೃತ್ಯ ಕಲಾ ಶಾಲೆಯ ವಿಧುಷಿ ಅರುಂಧತಿ ಭಟ್ಟ ಅವರಲ್ಲಿ ಕಲಿತು ಸೀನಿಯರ್ ಗ್ರೇಡ್ ಪರೀಕ್ಷೆ ಮುಗಿಸಿ, ಶಿವಮೊಗ್ಗದ ಶ್ರೀಮತಿ ಗೀತಾ ಧಾತಾರ್ ಇವರಲ್ಲಿ ಭರತನಾಟ್ಯ ವಿಧ್ವತ್ ಕಲಿಯುತ್ತಿದ್ದಾರೆ. ಪ್ರೌಢಶಾಲಾ ಹಂತದಲ್ಲೇ ಚಿತ್ರಕಲೆಯಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ಮುಗಿಸಿ ಸರ್ಟಿಫಿಕೇಟ್ ಪಡೆದುಕೊಂಡಿದ್ದು, ಪ್ರಸ್ತುತ ಕರ್ನಾಟಕ ಶಾಸ್ತ್ರಿಯ ಸಂಗೀತ ಕಲಿಯುತ್ತಿದ್ದಾರೆ. ಹವ್ಯಾಸಕ್ಕಾಗಿ ಚಿಕ್ಕಮಕ್ಕಳಿಗೆ ಭರತನಾಟ್ಯ ತರಗತಿ ನಡೆಸುತ್ತಾ ಬೇಸಿಕ್ ಚಿತ್ರಕಲೆ ಹಾಗೂ ಸಂಗೀತವನ್ನು ಹೇಳಿಕೊಡುತ್ತಾರೆ.
ಕರಕುಶಲ ಕಲೆಗಳನ್ನ, ಮದುವೆ ಅಲಂಕಾರಿಕಾ ವಸ್ತುಗಳನ್ನ, ಕೊಬ್ಬರಿ ಡಿಸೈನ್, ಮೆಹೆಂದಿ ಹಾಕುವುದು, ಸಮಾರಂಭಗಳಿಗೆ ಮೇಕಪ್ ಇತ್ಯಾದಿಗಳನ್ನು ಮಾಡುವ ಕಲೆಯೂ ಈಕೆಗೆ ಸಿದ್ಧಿಸಿದೆ. ಅದರ ಜೊತೆಗೆ ವಾಲ್ ಆರ್ಟ್, ಕ್ಯಾನ್ವಾಸ್ ಆರ್ಟನ್ನೂ ಸಹ ಮಾಡುತ್ತಾರೆ ಶೋಭಿತಾ. ಈಕೆಗೆ ಸಾಹಿತ್ಯದ ಕುರಿತು ಅತೀವ ಆಸಕ್ತಿಯಿದ್ದು, ಕವಿತೆಗಳನ್ನೂ ಬರೆಯುತ್ತಾರೆ. ಚಿಕ್ಕಂದಿನಿಂದಲೂ ನಾಟಕಗಳಲ್ಲಿ ಆಸಕ್ತಿಯನ್ನು ಮೂಡಿಸಿಕೊಂಡು ನಾಟಕ ಕಲಾವಿದೆ ಆಗಿಯೂ ‘ನಟಮಿತ್ರರು’ (ರಿ.) ತೀರ್ಥಹಳ್ಳಿ ಹವ್ಯಾಸಿ ಕಲಾ ಬಳಗ ದಲ್ಲಿ ಹದಿಮೂರು ವರ್ಷಗಳಿಂದ ಅಭಿನಯಿಸುತ್ತಿದ್ದು, ‘ಸೂರ್ಯ ಬಂದ’, ‘ಜಿ.ಕೆ ಮಾಸ್ತರ್ ಪ್ರಣಯ ಪ್ರಸಂಗ’, ‘ಸನ್ಮಾನ ಸುಖ’, ‘ಗಿಳಿಯಾದ ಮಂತ್ರವಾದಿ’, ‘ಅಗ್ನಿ ಮತ್ತು ಮಳೆ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

‘ಕಸದಿಂದ ರಸ’ ಎನ್ನುವ ಸಿದ್ಧಾಂತಕ್ಕೆ ಕಟ್ಟುಬಿದ್ದಿರುವ ಶೋಭಿತಾ ಮನೆಯ ನಿರುಪಯುಕ್ತ ವಸ್ತುಗಳನ್ನು ಎಸೆಯದೆ ಅವುಗಳಿಂದ ಏನಾದರೊಂದು ಹೊಸತನ್ನು ತಯಾರಿಸುವುದು ಈಕೆಯ ಬಹುಮುಖ್ಯ ಹವ್ಯಾಸಗಳಲ್ಲಿ ಒಂದು. ಮಾರುಕಟ್ಟೆಯಲ್ಲಿ ಕಾಣುವ ಯಾವುದೇ ವಸ್ತುವನ್ನು ಮನೆಯಲ್ಲಿ ಸಿಗುವ ನಿರುಪಯುಕ್ತ ವಸ್ತುಗಳಿಂದ ಅದರಂತೆಯೇ ತಯಾರಿಸುವ ಕಲೆ ಇವರಿಗೆ ಸಿದ್ಧಿಸಿದೆ. ಟೂತ್ ಪೇಸ್ಟ್ ಮುಚ್ಚಳದಿಂದ ಬಾಗಿಲಿನ ತೋರಣ, ಖಾಲಿಯಾದ ಪೆನ್ನುಗಳಿಂದ ಪೆನ್ನಿನ ಸ್ಟಾಂಡ್, ಪೆನ್ನುಗಳಿಂದ ಫೋಟೋ ಫ್ರೇಮ್, ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಂದ ಗೂಡುದೀಪ, ಹೂವುಗಳನ್ನು ಇವರು ತಯಾರಿಸುತ್ತಾರೆ.
ವಿಳ್ಯದೆಲೆಯಿಂದ ದೇವರಿಗೆ ಹಾರ ಮಾಡುವುದು ಇವರಲ್ಲಿರುವ ವಿಶಿಷ್ಟ ಕಲೆಗಳಲ್ಲೊಂದು. ವಾರಕ್ಕೊಂದು ತನ್ನ ಮನಸ್ಸಿಗೆ ತೋಚಿದ ರೀತಿಯ ವೀಳ್ಯದ ಎಲೆಯ ಹಾರವನ್ನು ಮಾಡಿ ದೇವಸ್ಥಾನಕ್ಕೆ ನೀಡುತ್ತಾರೆ. ಸೀಸನ್ ಸಮಯದಲ್ಲಿ ಭತ್ತದ ತೆನೆಗಳಿಂದ ತೋರಣ ತಯಾರಿಸುತ್ತಾರೆ. ರಂಗೋಲಿಯಲ್ಲೂ ವಿಶೇಷ ಆಸಕ್ತಿ ಇವರಿಗಿದ್ದು, ಚುಕ್ಕಿ ರಂಗೋಲಿಗಿಂತ ಫ್ರೀಹ್ಯಾಂಡ್ ರಂಗೋಲಿ ಮೇಲೆ ಹೆಚ್ಚು ಆಸಕ್ತಿ. ಕಾಲೇಜು ದಿನಗಳಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಪ್ರತಿ ವರ್ಷವೂ ಪ್ರಥಮ ಬಹುಮಾನ ಪಡೆದಿದ್ದಾರೆ. ಎಲ್ಲರೂ ಮಾಡುವುದನ್ನೇ ನಕಲು ಮಾಡುವುದು ಈಕೆಗೆ ಇಷ್ಟವಿಲ್ಲ, ಇತರರಿಗೆ ಇಷ್ಟವಾಗದಿದ್ದರೂ ತನ್ನ ಖುಷಿಗಾಗಿ ಮತ್ತು ಆತ್ಮತೃಪ್ತಿಗಾಗಿ ಸ್ವಂತ ಹೊಸತನ್ನು ಮಾಡುವುದೆಂದರೆ ಇವರಿಗೆ ಅಚ್ಚುಮೆಚ್ಚು.

ಮನೆಯ ಗೋಡೆಗಳ ಮೇಲೆ ಚಿತ್ತಾಕರ್ಷಕವಾದ ಚಿತ್ರಗಳು ಮತ್ತು ಪೈಂಟಿಂಗ್ ಮಾಡುವುದೂ ಇವರ ಪ್ರಮುಖ ಹವ್ಯಾಸಗಳಲ್ಲೊಂದು. ಪ್ರಥಮ ಪ್ರಯತ್ನದಲ್ಲಿ ಬೆಳಗ್ಗೆ 6 ಗಂಟೆಗೆ ಶುರು ಮಾಡಿ ಸಂಜೆ 8 ಗಂಟೆಗೆ 6 ಅಡಿ ಎತ್ತರದ ಯಕ್ಷಗಾನದ ಕೃಷ್ಣನ ಚಿತ್ರವನ್ನು ಬರೆದು ಸೈ ಅನಿಸಿಕೊಂಡು, ಬರೇ ಮುಕ್ಕಾಲು ಗಂಟೆಯಲ್ಲಿ 4 ಅಡಿ ಎತ್ತರದ ಬುದ್ಧನ ಚಿತ್ರವನ್ನೂ ಬರೆದಿದ್ದಾರೆ. ಕೇವಲ ಎರಡು ದಿನದಲ್ಲಿ 4 ಅಡಿಯ ಆದಿಯೋಗಿ ಶಿವ, 6 ಅಡಿಯ ರಾಧಾಕೃಷ್ಣರ ಚಿತ್ರಗಳನ್ನು, ಬಾಗಿಲಮೇಲೆ ಪುಟ್ಟ ಶಿರಡಿ ಸಾಯಿಬಾಬಾರ ಚಿತ್ರ ಬಿಡಿಸಿದ್ದಾರೆ. ಶಿರಸಿಯ ಅಜಿತ ಮನೋಚೇತನ ಶಾಲೆಯ ಗೋಡೆಗಳಲ್ಲಿ ಮಕ್ಕಳ ಬುದ್ದಿಮಟ್ಟಕ್ಕೆ ಅನುಗುಣವಾದ ಚಿತ್ರಗಳನ್ನು ಬರೆದಿದ್ದಾರೆ.
ಮನುಷ್ಯನ ಕ್ರಿಯಾಶೀಲತೆ ಎನ್ನುವುದು ಮಾದಕ ವಸ್ತುವಿದ್ದಂತೆ, ಒಮ್ಮೆ ಮಾದಕ ವಸ್ತುವಿನ ವ್ಯಸನಕ್ಕೆ ಒಳಗಾದರೆ ಹೇಗೆ ಅದನ್ನು ಬಿಟ್ಟಿರಲು ಆಗುವುದಿಲ್ಲವೋ ಅದೇ ರೀತಿ ಕ್ರಿಯಾಶೀಲತೆಯ ವ್ಯಸನಕ್ಕೆ ಅಂಟಿಕೊಂಡರೆ ಮತ್ತೆ ಅದರಿಂದ ಹೊರಬರಲು ಸಾಧ್ಯವಿಲ್ಲ ಎನ್ನುವ ಚಿಂತಕ ಡಿ.ಮಿಲ್ಲೆ ಅವರ ಮಾತಿನಂತೆ ಶೋಭಿತಾ ಕ್ರಿಯಾಶೀಲ ಕಲೆಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
ಇವರ ಸೃಜನಶೀಲ ಕಲೆಗಳು ಮತ್ತು ಕಲೆಗಳನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಈಕೆಯ ಬಧ್ಧತೆ ಎಲ್ಲರಿಗೂ ಮಾದರಿ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160