ಮೊಳಗಲಿ ಕನ್ನಡದ ಕಹಳೆ

ಮೊಳಗಲಿ ಕನ್ನಡದ ಕಹಳೆ

ನವೆಂಬರ್ ತಿಂಗಳು ಬಂತು ಅಂದರೆ, ಎಲ್ಲೆಡೆ ಕೆಂಪು ಮತ್ತು ಹಳದಿ ಬಣ್ಣದ ಸೊಬಗನ್ನು ಕಾಣಬಹುದು. ಯಾಕೆಂದರೆ ಇದು ಕನ್ನಡ ನಾಡಿನ ಹಬ್ಬ, ನಮ್ಮೆಲ್ಲರ ಹಬ್ಬ. ನವೆಂಬರ್ ಮಾಹೇ ಪೂರ್ತಿ ಕನ್ನಡ ರಾಜ್ಯೋತ್ಸವದ ಆಚರಣೆಗೆ ನಾವೆಲ್ಲರೂ ಸಾಕ್ಷಿಯಾಗಬಹುದು.

ಶೋಚನೀಯ ವಿಷಯವೇನೆಂದರೆ, ನಮಗೆ ಕನ್ನಡ ಭಾಷೆಯ ಮೇಲೆ ನವೆಂಬರ್ ತಿಂಗಳಲ್ಲಿರುವ ಅಭಿಮಾನ, ಉಳಿದ ತಿಂಗಳುಗಳಲ್ಲಿ ಇರೋದಿಲ್ಲ. ಯಾಕೆಂದರೆ ನಮ್ಮಲ್ಲಿ ಕೆಲವರಿಗೆ ಅಕ್ಟೋಬರ್ 31 ಅಥವಾ ನವೆಂಬರ್ 1ರ ಬೆಳಿಗ್ಗೆ ಎದ್ದು, ಕ್ಯಾಲೆಂಡರ್ ನಲ್ಲಿ ಕೆಂಪು ಅಂಕಿ 1ನ್ನು ನೋಡಿದಾಗ ನಮಗೆ ಕನ್ನಡ ರಾಜ್ಯೋತ್ಸವದ ನೆನಪಾಗುವುದು. ಇನ್ನು ಕೆಲವರು ಸರ್ಕಾರಿ ರಜೆಯೆಂದು ಪರಿಗಣಿಸಿ, ಈ ದಿನವನ್ನು ವಿಶ್ರಾಂತಿಗಾಗಿ ಬಳಸುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ? ನಮ್ಮ ಹುಟ್ಟು ಹಬ್ಬ ಇನ್ನೂ ಕೆಲ ದಿನಗಳಿರಬೇಕಾದರೇನೆ, ಹೇಗೆ ಆಚರಿಸುವುದು ಅಂತ ಯೋಚಿಸುತ್ತೇವೆ. ಹುಟ್ಟುಹಬ್ಬದ ದಿನದಂದು ರಾತ್ರಿ 12 ಗಂಟೆಗೆ ಯಾರೆಲ್ಲ ಶುಭ ಕೋರಿದ್ದಾರೆ ಎಂದು ನೋಡಲು ಕಾತುರದಿಂದ ಕಾಯುತ್ತೇವೆ. ಆದರೆ ನಮ್ಮ ನಾಡಿನ ಹುಟ್ಟು ಹಬ್ಬವನ್ನು ನಿರ್ಲಕ್ಷಿಸುತ್ತೇವೆ.

ಇನ್ನೂ ಕೆಲವರು ನವೆಂಬರ್ 1ನೇ ತಾರೀಖು ತಮ್ಮ ಏರಿಯಾದಲ್ಲಿ ಪೆಂಡಾಲ್ ಹಾಕಿ, ಕನ್ನಡ ಬಾವುಟವನ್ನು ಹಾರಿಸಿ, ಒಂದೆರಡು ಕನ್ನಡ ಹಾಡುಗಳನ್ನು ಜೋರಾಗಿ, ಕರ್ಕಶವಾಗಿ ಹಿರಿಯರಿಗೆ ತೊಂದರೆಯಾಗುವ ರೀತಿಯಲ್ಲಿ ಸ್ಪೀಕರ್‌ಗಳಲ್ಲಿ ಹಾಕಿ, ಪಟಾಕಿಯನ್ನು ಸಿಡಿಸುವುದನ್ನು ಕನ್ನಡ ರಾಜ್ಯೋತ್ಸವದ ಆಚರಣೆಯೆಂದು ಭಾವಿಸುತ್ತಾರೆ. ಕೆಲ ಶಿಕ್ಷಣ ಸಂಸ್ಥೆಗಳೂ ವರ್ಷದಲ್ಲಿ ಈ ಒಂದು ದಿನ ಮಾತ್ರ ವಿದ್ಯಾರ್ಥಿಗಳಿಗೆ ಕನ್ನಡವನ್ನು ಮಾತನಾಡಲು ಅನುಮತಿ ನೀಡುತ್ತಾರೆ. ವರ್ಷದ ಇನ್ನುಳಿದ ದಿನ ವಿದ್ಯಾರ್ಥಿಗಳು ತಾವು ಯಾವ ಮಾಧ್ಯಮದ ಶಾಲೆಯಲ್ಲಿರುತ್ತಾರೋ, ಅದೇ ಭಾಷೆಯನ್ನೇ ಮಾತನಾಡಬೇಕೆಂಬ ನಿಯಮಗಳು ಇವೆ. ವಿದ್ಯಾ ಸಂಸ್ಥೆಗಳ ವಿಚಾರ ಹೀಗಾದರೆ. ಇನ್ನು ನಾವು ಜನಸಾಮಾನ್ಯರು, ಕನ್ನಡ ರಾಜ್ಯೋತ್ಸವದಂದು ಕೆಂಪು ಮತ್ತು ಹಳದಿ ಬಣ್ಣಗಳೊಳಗೊಂಡ ಉಡುಪುಗಳನ್ನು ಧರಿಸಿ, ಫೋಟೋ ತೆಗೆಸಿಕೊಂಡು, ‘ಕನ್ನಡ ರಾಜ್ಯೋತ್ಸವದ ಶುಭಾಶಯಗಳು’ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರೆ ನಮ್ಮ ಆಚರಣೆ ಮುಗಿಯಿತು ಎಂದು ಭಾವಿಸುತ್ತೇವೆ. ಇದು ಡಾಂಭಿಕ ಆಚರಣೆ, ಕೇವಲ ತೋರ್ಪಡಿಕೆ ಆಚರಣೆಯಾಗುವುದೇ ಹೊರತಾಗಿ ಚಿಂತನಾತ್ಮಕವಾದ ಅಥವಾ ಪರಿಣಾಮಕಾರಿಯಾದ ಆಚರಣೆಯಾಗುವುದಿಲ್ಲ.

ಖುಷಿಯ ವಿಚಾರವೇನೆಂದರೆ, ವಿದೇಶದಲ್ಲಿರುವ ಕನ್ನಡಿಗರು ಹಲವಾರು ವರ್ಷಗಳ ನಂತರ ಭಾರತಕ್ಕೆ ಬಂದಾಗ, ತಾವು ಕನ್ನಡವನ್ನು ಮರೆತಿರುವುದಿಲ್ಲ. ಹಾಗೆ ನೋಡಿದರೆ, ಇಲ್ಲಿ ಇರುವವರಿಗಿಂತ ಅಲ್ಲಿಯವರೇ ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ(ಮೆಸೇಜ್) ಕಳುಹಿಸುವಾಗಲೂ ಸಹ ಕನ್ನಡದಲ್ಲೇ ಬೆರಳಚ್ಚು(ಟೈಪ್) ಮಾಡುತ್ತಾರೆ. ಕೆಲವರು, ಕನ್ನಡ ಅಂಕಿಗಳುಳ್ಳ ಗಡಿಯಾರ ಮತ್ತು ಕನ್ನಡದಲ್ಲಿರುವ ದಿನದರ್ಶಿಕೆಯನ್ನು(ಕ್ಯಾಲೆಂಡರ್) ಬಳಸುತ್ತಾರೆ. ತಮ್ಮ ಮಾತೃ ಭಾಷೆ ಬೆರೆಯಾದರೂ ಕನ್ನಡವನ್ನು ಕಲಿತು, ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಉದಾಹರಣೆಗಳಿವೆ. ಇದು ನಿಜವಾದ ಭಾಷಾ ಪ್ರೇಮ. ಇನ್ನು ಪರಭಾಷೆ ತಿಳಿದವರನ್ನು, ಕನ್ನಡ ಮಾತನಾಡಲು ಬಾರದವರನ್ನು ‘ನಿಮಗೆ ಕನ್ನಡ ಗೊತ್ತೆ?’ ಅಂತ ನಾವು ಕೇಳಿದಾಗ, ಅವರು ‘ಸ್ವಲ್ಪ ಬರುತ್ತೆ’ ಅಂತ ಕನ್ನಡದಲ್ಲೇ ಉತ್ತರಿಸಲು ಪ್ರಯತ್ನಿಸುತ್ತಾರೆ. ಅವರು ಇಷ್ಟಾದರೂ ಕನ್ನಡ ಮಾತನಾಡಲು ಪ್ರಯತ್ನಿಸುವಾಗ, ಕನ್ನಡದವರಾಗಿ ನಾವೇಕೆ ಇನ್ನೂ ಹೆಚ್ಚು-ಹೆಚ್ಚು ಪ್ರಯತ್ನ ಮಾಡಬಾರದು?

ಇಂದಿನ ಆಧುನಿಕ ಸಮಾಜದಲ್ಲಿ ಪೋಷಕರು, ತಮ್ಮ ಮಕ್ಕಳು ಅಂತರಾಷ್ಟ್ರೀಯ ಭಾಷೆಗಳನ್ನು ಕಲಿಯಲು ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕೆಂದು ಬಯಸುತ್ತಾರೆ. ಅಷ್ಟೇ ಅಲ್ಲದೆ, ಮಾತೃ ಭಾಷೆ ಕನ್ನಡವಾಗಿದ್ದರೂ, ಮನೆಯಲ್ಲಿ ಮಕ್ಕಳೊಂದಿಗೆ ಆಂಗ್ಲಭಾಷೆಯಲ್ಲಿ ಮಾತನಾಡುತ್ತಾರೆ. ಕಲಿಯುವುದಕ್ಕೆ, ವ್ಯವಹಾರಕ್ಕೆ ಯಾವ ಭಾಷೆಯಾದರೂ ತೊಂದರೆಯಿಲ, ಆದರೆ ನಮ್ಮ ಮಾತೃ ಭಾಷೆಯನ್ನು ಮರೆಯದಿರಲು ಪ್ರಯತ್ನಿಸೋಣ. ನಾವು ಕನ್ನಡದವರಾಗಿ ಎಷ್ಟೇ ಭಾಷೆಗಳನ್ನು ತಿಳಿದವರಾಗಿದ್ದರೂ, ಅರ್ಜಿಯನ್ನು ಭರ್ತಿಮಾಡಬೇಕಾದರೆ, ಮಾತೃ ಭಾಷೆ ಎನ್ನುವ ಅಂಕಣದಲ್ಲಿ(ಕಾಲಂ) ಕನ್ನಡ ಎಂದೇ ನಮೂದಿಸಬೇಕು.
ಈ ಕನ್ನಡ ರಾಜ್ಯೋತ್ಸವದಂದು ಒಂದು ಕನ್ನಡ ಪುಸ್ತಕವನ್ನು ಖರೀದಿಸಿ ಓದಲು ಪ್ರಯತ್ನಿಸೋಣ. ದುಂದು ವೆಚ್ಚ ಮಾಡಿ ತೋರುವಿಕೆಯ ಆಚರಣೆ ಮಾಡುವ ಬದಲು, ಅದೇ ಖರ್ಚಿನಲ್ಲಿ ಸಾಧ್ಯವಾದಷ್ಟು ಕನ್ನಡ ಪುಸ್ತಕಗಳನ್ನು ಹಂಚುವ ಪ್ರಯತ್ನ ಮಾಡಬಹುದು. ಯಾರಾದರೂ ಕನ್ನಡವನ್ನು ಮಾತನಾಡಲು ಬಾರದೇ ಇರುವವರು ನಮಗೆ ಪರಿಚಿತರಿದ್ದರೆ, ಅವರಿಂದ ಸರಳ ಮಾತುಗಳನ್ನು ಕನ್ನಡದಲ್ಲಿ ಮಾತನಾಡಿಸುವ ಪ್ರಯತ್ನ ಮಾಡೋದು ಒಳ್ಳೆಯ ಆಚರಣೆಯಾಗುವುದು.

ನಮ್ಮ ಪೂರ್ವಜರು ಕನ್ನಡಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಪರಿಶ್ರಮದಿಂದ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಷಯ. ಇಂದಿನ ಪೀಳಿಗೆಯವರು ಕನ್ನಡಕ್ಕೆ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡುವ ಪ್ರಯತ್ನ ಮಾಡಿದರೆ, ಖಂಡಿತ ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಇನ್ನಷ್ಟು ಜ್ಞಾನಪೀಠ ಪ್ರಶಸ್ತಿಗಳು ತಂದುಕೊಡುವುದರ ಮೂಲಕ ಕನ್ನಡ ಭಾಷೆಯ ಸ್ಥಾನ-ಮಾನ ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಎಲ್ಲಾ ಭಾಷೆಗಳನ್ನು ಕಲಿಯುವುದು, ಬೇರೆ ಭಾಷೆಯ ಪುಸ್ತಕಗಳನ್ನು ಓದುವುದು, ಬೇರೆ ಭಾಷೆಯ ಸಿನಿಮಾಗಳನ್ನು ನೋಡುವುದು ತಪ್ಪಲ್ಲ ಆದರೆ ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಮರೆಯುವುದು ಎಳ್ಳಷ್ಟೂ ಸೂಕ್ತವಲ್ಲ.

ಕನ್ನಡ ಭಾಷೆಯ ಮೇಲಿರುವ ಅಭಿಮಾನವನ್ನು ಕೇವಲ ನವೆಂಬರ್ 1ಕ್ಕೆ ಮಾತ್ರ ಸೀಮಿತಪಡಿಸದೇ, ವರ್ಷದ 365 ದಿನವೂ ಎಲ್ಲರೂ ನಮ್ಮ ಮಾತೃಭಾಷೆಯನ್ನು ಪ್ರೀತಿಸುವುದರೊಂದಿಗೆ ಅದನ್ನು ಗೌರವಿಸೋಣ ಹಾಗೂ ಬೆಳೆಸೋಣ. ಜೈ ಕರ್ನಾಟಕ ಮಾತೆ. ಜೈ ಭುವನೇಶ್ವರಿ.

ಮನು ಭಾರದ್ವಾಜ್ ವಿ.

8861151021

Related post