ಸುರಕ್ಷಾ ಜಾಗೃತಿ – 7
(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು)
ಅಪರಿಚಿತರನ್ನು ಅನುಮಾನಿಸು
ಸುರಕ್ಷತೆಯ ಪಾಠದಲ್ಲಿ ಇದು ಕೂಡ ಒಂದು ಮುಖ್ಯವಾದ ವಾಕ್ಯವಾಗಿದೆ ಮತ್ತು ಇದನ್ನು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ನೆನಪಿನಲ್ಲಿಟ್ಟುಕೊಳ್ಳತಕ್ಕದ್ದು. ನಿಮಗೆಲ್ಲರಿಗೂ ನಿಮ್ಮ ಬಾಲ್ಯದಲ್ಲಿ ತಂದೆ ತಾಯಂದಿರು ನೀವು ಶಾಲೆಗೆ ಹೋಗುವಾಗ ಹೇಳುತ್ತಿದ್ದಂತಹ ಬುದ್ದಿಮಾತು ಇಂದಿಗೂ ನೆನಪಿದೆಯಲ್ಲವೇ? ಅದೇನಂದರೆ ಯಾರೇ ಆದರೂ ಏನಾದರೂ ಚಾಕೋಲೇಟ್ ಕೊಟ್ಟರೆ ತೆಗೆದುಕೊಳ್ಳಬಾರದು. ಯಾರಾದರೂ ಕರೆದರೆ ಅಥವಾ ಮನೆಗೆ ಬಿಡುತ್ತೇನೆ ಅಂದರೆ ಹೋಗಬಾರದು. ಇಂತಹ ಹಲವಾರು ಬುದ್ದಿಮಾತುಗಳನ್ನು ದಿನನಿತ್ಯ ನಮಗೆಲ್ಲರಿಗೂ ನಮ್ಮ ಹಿರಿಯರು ಹೇಳುತ್ತಿದ್ದರಲ್ಲವೇ?…
ಆದರೆ ನಾವು ಬೆಳೆದಂತೆ ಆ ಬುದ್ದಿಮಾತುಗಳನ್ನು ನಾವು ಮರೆತಿದ್ದೇವೆ. ಅಂದು ಅವರು ನಮಗೆ ಹೇಳಿದ ಆ ಬುದ್ದಿಮಾತುಗಳನ್ನು ನಾವು ಸರಿಯಾಗಿ ಪಾಲಿಸಿದ್ದರೆ ಹಲವಾರು ಅವಘಡಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದಾಗಿರುತ್ತಿತ್ತು. ಅವರುಗಳ ಆ ಬುದ್ದಿಮಾತು ಎಷ್ಟೊಂದು ದೂರದೃಷ್ಟಿಯಿಂದ ಕೂಡಿರುತ್ತಿತ್ತು ಅಂತ ಊಹಿಸಲು ಇತ್ತೀಚೆಗೆ ನಡೆಯುತ್ತಿರುವ ಅಪರಾಧಗಳನ್ನು, ದೌರ್ಜನ್ಯಗಳನ್ನು ಅವುಗಳ ಹಿನ್ನಲೆಯನ್ನು ತಿಳಿದುಕೊಂಡಾಗ ನಮಗದರ ಮಹತ್ವದ ಅರಿವಾಗುತ್ತದೆ.
ಇತ್ತೀಚೆಗೆ ಸಂಭವಿಸಿರುವಂತಹ ಹಲವಾರು ಕೊಲೆ,ಸುಲಿಗೆ, ವಂಚನೆ,ಕಿಡ್ನಾಪ್, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಇತ್ಯಾದಿ ಈ ಎಲ್ಲಾ ಕೃತ್ಯದಲ್ಲಿಯೂ ಒಂದು ಸಾಮಾನ್ಯವಾಗಿ ಕಂಡುಬರುವ ಸತ್ಯವಿಚಾರವೆಂದರೆ ಅಪರಿಚಿತರು. ಹಾಗಾಗಿ ನಮಗೆ ಚಿರಪರಿಚಿತರನ್ನು ಬಿಟ್ಟು ಉಳಿದವರು ಯಾರೇ ಇರಲಿ ಅವರೆಲ್ಲರನ್ನೂ ಸುರಕ್ಷತೆಯ ದೃಷ್ಟಿಯಿಂದ ಅಪರಿಚಿತರೆಂದೇ ಪರಿಗಣಿಸಿ ಅವರನ್ನು ಅನುಮಾನಿಸಿ ಅವರಿಂದ ಆದಷ್ಟು ದೂರವಿರುವುದೇ ಒಳಿತು.
ಈಗಿನ ಕಾಲಘಟ್ಟದಲ್ಲಿ ನಮ್ಮ ಸ್ವಂತದವರನ್ನೇ ನಂಬಲು ಅಸಾಧ್ಯವಾಗಿರುವಾಗ ನಮಗೆ ಗೊತ್ತಿರದೇ ಇರುವವರನ್ನು ನಂಬುವುದಾದರೂ ಹೇಗೆ? ಆದರೆ ಇಂದಿನ ಈ ಯುವ ಜನಾಂಗ ಇದಾವುದನ್ನೂ ಯೋಚಿಸದೆಯೇ ಈ ಅಪರಿಚಿತರ ಬಲೆಗೆ ಅವರ ಸುಳಿಯ ಕೂಪಕ್ಕೆ ಸುಲಭದ ತುತ್ತಗುತ್ತಿರುವುದು ತುಂಬಾ ಬೇಸವನ್ನುಂಟುಮಾಡಿದೆ.
ಈಗಿನ ಯಾಂತ್ರಿಕ ಯುಗದಲ್ಲಿ ಎಲ್ಲವೂ ಗಣಕಯಂತ್ರದ ಮೂಲಕ ಅಥವಾ ಚರದೂರವಾಣಿಯ ಮೂಲಕ ನಮ್ಮ ದಿನನಿತ್ಯದ ವಹಿವಾಟುಗಳು ನಡೆಯುತ್ತಿವೆ. ಇಂತಹ ವಹಿವಾಟುಗಳನ್ನು ಮಾಡುವಾಗಲೂ ಸಹ ನಾವು ಎಷ್ಟು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೂ ಕೂಡ ಕಮ್ಮಿಯೇ. ಏಕೆಂದರೆ ಇಂದಿನ ಅಂಕಿಅಂಶಗಳನ್ನು ಗಮನಿಸಿದರೆ ಈ cyber crime ಅನ್ನುವಂತದ್ದು ವಿಪರೀತವಾಗಿಹೋಗಿಬಿಟ್ಟಿದೆ. ಇದರಲ್ಲಿ ಹಣಕಾಸಿನ ಸುಲಿಗೆ, honey trap, blackmail, ನಿಮ್ಮ ಛಾಯಾ ಚಿತ್ರವನ್ನು ಮಾರ್ಪಾಡು ಮಾಡಿ ಅದನ್ನೇ ಅಶ್ಲೀಲಗೊಳಿಸಿ ಬಿತ್ತರಿಸಿ ಮಾನವನ್ನು ಹಾಳುಮಾಡುವುದು, ಇದೆಲ್ಲವನ್ನು ತೋರಿಸಿ ಬಲೆಬೀಸಿ ದೌರ್ಜನ್ಯವನ್ನು ಎಸಗುತ್ತಿರುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ.
ಅದರಲ್ಲೂ ಈಗಿನ ಯುವ ಜನತೆ ತಮ್ಮ ಚರದೂರವಾಣಿಯಲ್ಲಿ status upload ಮಾಡುವುದು,reels ಮಾಡುವುದು, social media ದಲ್ಲಿ ತಮ್ಮ photo,Viedo share ಮಾಡುತ್ತಿರುವುದು ತುಂಬಾ ಜಾಸ್ತಿಯಾಗಿದೆ.ಅವರಿಗಾರಿಗೂ ಇದರ ಇನ್ನೊಂದು ಮುಖ ಇನ್ನೂ ಗೋಚರಿಸುತ್ತಲೇ ಇಲ್ಲ. ಇದರ ದುರುಪಯೋಗವನ್ನು ಈ ಅಪರಿಚಿತರು ಸುಲಭವಾಗಿ ಪಡೆಯಬಹುದಾಗಿದೆ. ಇದೆಲ್ಲವೂ ಮುಂದೆ ಇವರುಗಳಿಗೇ ಕಂಟಕವಾಗುವುದೆಂದು ಯಾರೂ ಕೂಡ ಊಹಿಸುವುದೇ ಇಲ್ಲ. ಮುಂದೊಂದು ದಿನ ಇದು ದೊಡ್ಡ ಗಂಡಾಂತರವಾಗಿ ತಮ್ಮ ಮುಂದೆ ಬಂದು ನಿಂತಾಗಲೇ ತಲೆಯ ಮೇಲೆ ಕೈ ಇಟ್ಟುಕೊಳ್ಳಬೇಕಾಗುತ್ತದೆ.
ಹಾಗಾಗಿ ನಾವು ಏನೇ ಕೆಲಸ ಮಾಡುವ ಮುಂಚೆ ಅದನ್ನು ಒಮ್ಮೆ ಸುರಕ್ಷತೆಯ ದೃಷ್ಟಿಯಿಂದ ನೋಡಿ ಮನದಟ್ಟು ಮಾಡಿ ನಂತರವೇ ಮುಂದುವರೆಯುವುದು ಒಳಿತು.
ಸುರಕ್ಷತೆಯ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ ಎಷ್ಟು ತಿಳಿದರೂ ಇನ್ನೂ ತಿಳಿಯಬೇಕಾಗಿರುವುದು ಬಹಳಷ್ಟು ಇರುತ್ತದೆ. ಅದಕ್ಕಾಗಿಯೇ “Think always safety & your safety is purely in your hand” ಅಂತ ಹೇಳುವುದು.
ಮುಂದುವರಿಯುವುದು….
ಶ್ರೀನಿಧಿ ಹೊಸಬೆಟ್ಟು