ಹೂಮಾಲೆಯಾದ ಆಂಡಾಳು
ಪುಸ್ತಕ : ಹೂಮಾಲೆಯಾದ ಆಂಡಾಳು
ಲೇಖಕರು: ಆಶಾ ರಘು
ಪ್ರಕಟಣೆ : ಉಪಾಸನ ಬುಕ್ಸ್
ದರ : 120
ಲೇಖಕರ ಅರಿಕೆ
ಸುಮಾರು ಏಳನೇ ಶತಮಾನದಲ್ಲಿ ಜೀವಿಸಿದ್ದ ಆಂಡಾಳು, ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು. ಇವಳ ಇನ್ನೊಂದು ಹೆಸರು ಗೋದಾದೇವಿ. ಇವಳು ಪೆರಿಯಾಳ್ವಾರರ ಸಾಕುಮಗಳು. ಕಟಕಮಾಸದ ಪೂರ್ವಫಾಲ್ಗುಣಿ ನಕ್ಷತ್ರದಲ್ಲಿ ಸಾಕ್ಷಾತ್ ಭೂದೇವಿಯೇ ಎಂದು ಪರಿಭಾವಿಸಲಾಗಿರುವ ಈಕೆಯ ಜನ್ಮದಿನೋತ್ಸವ ಜರುಗುತ್ತದೆ.

ಆಂಡುಳುವಿನ ಕಥೆ ಪ್ರಸಿದ್ಧವಾಗಿರುವಂತಹುದು. ಪೆರಿಯಾಳ್ವಾರರು ದೇವರಿಗೆಂದು ಕಟ್ಟಿ ಇರಿಸುತ್ತಿದ್ದ ಹೂಮಾಲೆಯನ್ನು ಇವಳು ಮುಡಿದು ಲೋಹದ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡು, ನಂತರ ತಂದೆಗೆ ಗೊತ್ತಾಗದಂತೆ ಬುಟ್ಟಿಯಲ್ಲಿ ಇರಿಸಿಬಿಡುತ್ತಿದ್ದಳು. ಒಂದು ದಿನ ತಂದೆಗೆ ಗೊತ್ತಾಗಿ, ಇವಳನ್ನು ಬೈದು, ಆ ಮಾಲೆಯನ್ನು ದೇವಾಲಯಕ್ಕೆ ಒಯ್ಯದೆ, ಬೇರೆ ಮಾಲೆಯನ್ನು ತೆಗೆದುಕೊಂಡು ಹೋದರು. ಆದರೆ ಭಗವಂತ ಆ ಮಾಲೆಯನ್ನು ಸ್ವೀಕರಿಸದೆ, ಆಂಡಾಳು ಧರಿಸಿಕೊಂಡಿದ್ದ ಮಾಲೆಯೇ ತನಗೆ ಬೇಕೆಂದೂ, ಅವಳು ನನ್ನನ್ನು ವರಿಸಲೆಂದೇ ಹುಟ್ಟಿದ ಭೂದೇವಿ ಎಂದೂ ಹೇಳುತ್ತಾನೆ. ಆಂಡಾಳುವು ಶ್ರೀರಂಗನಾಥನನ್ನೇ ವಿವಾಹವಾಗಬೇಕೆಂದು ಮೊದಲೇ ಸಂಕಲ್ಪಿಸಿಕೊಂಡಿದ್ದು, ತಾನೇ ರಚಿಸಿದ ತಿರುಪ್ಪಾವೈಯನ್ನು ದಿನಕ್ಕೊಂದರಂತೆ ಭಗವಂತನಿಗಾಗಿ ಹಾಡಿ, ತನ್ನ ಸಖಿಯರೊಡನೆ ಮಾರ್ಗಶಿರ ಮಾಸದ ವ್ರತವನ್ನು ಆಚರಿಸುತ್ತಾಳೆ. ಕಡೆಗೆ ಪೆರಿಯಾಳ್ವಾರರೇ ಮುಂದೆ ನಿಂತು ಆಂಡಾಳುವಿಗೆ ಶ್ರೀರಂಗದ ಶ್ರೀರಂಗನಾಥನೊಂದಿಗೆ ವಿಜೃಂಭಣೆಯಿಂದ ಮದುವೆ ಮಾಡಿಸುತ್ತಾರೆ. ಹೂಮಾಲೆಯನ್ನು ಶ್ರೀರಂಗನಾಥನಿಗೆ ಅರ್ಪಿಸಿ, ತಾನೂ ಅವನಲ್ಲಿ ಐಕ್ಯಳಾಗಿಬಿಡುತ್ತಾಳೆ.
ಈಕೆಯಿಂದ ನಮಗೆ ಲಭಿಸಿರುವುದು ಪ್ರಖ್ಯಾತವಾದ ‘ತಿರುಪ್ಪಾವೈ’ ಎಂಬ ಮೂವತ್ತು ಬಿಡಿ ಪದ್ಯಗಳ ಗೀತೆ ಮತ್ತು ‘ನಾಚ್ಚಿಯಾರ್ ತಿರುಮೊಳಿ’ ಎಂಬ ನೂರಾ ನಲವತ್ತೇಳು ಬಿಡಿ ಪದ್ಯಗಳು.

ಭಕ್ತಿ ಸಾಹಿತ್ಯದಲ್ಲಿ ಭಗವಂತನನ್ನು ಕುರಿತಾದ ಪ್ರೇಮಗೀತೆಗಳದ್ದೇ ಎಂದಿಗೂ ಪ್ರಾಧಾನ್ಯ. ಅಂತಹ ಪ್ರೇಮಗೀತೆಗಳಲ್ಲಿ ಆಂಡಾಳು ರಚಿಸಿದ ತಿರುಪ್ಪಾವೈ ಭಕ್ತಿ ಜಗತ್ತಿನಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ತಿರು ಎಂದರೆ ಮೋಕ್ಷ; ಪಾವೈ ಎಂದರೆ ವ್ರತ. ಎಂದರೆ ಇದು ಮೋಕ್ಷ ನೀಡುವ ವ್ರತಾಚರಣೆಯಾಗಿದೆ. ನಂದಗೋಕುಲದಲ್ಲಿದ್ದ ಗೋಪಿಯರು ಮಾರ್ಗಶಿರ ಮಾಸದಲ್ಲಿ ಕಾತ್ಯಾಯಿನಿ ವ್ರತವನ್ನು ಮಾಡಿ ಶ್ರೀಕೃಷ್ಣನನ್ನು ಪತಿಯಾಗಿ ಪಡೆದರು. ಇದರಿಂದ ಸ್ಫೂರ್ತಿಗೊಂಡ ಆಂಡಾಳು ಕೂಡಾ ಭಗವಂತನನ್ನು ಒಲಿಸಿಕೊಳ್ಳಲು ಈ ಮಾರ್ಗಶಿರ ಮಾಸದ ವ್ರತವನ್ನು ಆಚರಿಸಿ, ತನ್ನ ಮನದಾಸೆಯನ್ನು ಈಡೇರಿಸಿಕೊಂಡಳು. ಉತ್ತರ ಭಾರತದ ಮೀರಾಬಾಯಿ ಹೇಗೋ ದಕ್ಷಿಣದಲ್ಲಿ ಆಂಡಾಳು ಹಾಗೆ. ರಾಮಾನುಜಾಚಾರ್ಯರು ತಿರುಪ್ಪಾವೈಯನ್ನು ಆಗಾಗ ಹೇಳುತ್ತಾ ಕಣ್ಣೀರಿಡುತ್ತಿದ್ದರಂತೆ. ವೇದಾಂತ ದೇಶಿಕರು ಗೋದಾ ಸ್ತುತಿ ಎಂಬ ಸುಂದರವಾದ ಸ್ತೋತ್ರದಲ್ಲಿ ಈಕೆಯನ್ನು ಕೊಂಡಾಡಿದ್ದಾರೆ.
ಚಿಕ್ಕಂದಿನಿಂದ ಧನುರ್ಮಾಸದ ಪೂಜೆಗಳಲ್ಲಿ ನಿರತಳಾಗಿ, ತಿರುಪ್ಪಾವೈ ಜೊತೆಗೆ ಆಂಡಾಳುವಿನ ವಿಶಿಷ್ಟವಾದ ಕಥೆಯನ್ನು ಕೇಳುತ್ತಾ ಬೆಳೆದವಳು ನಾನು. ಬಹಳ ಕಾಲದಿಂದ ಈಕೆಯ ಕುರಿತು ಬರೆಯಬೇಕೆಂಬ ಆಸೆಯಿದ್ದಿತು. ಅದು ‘ವಕ್ಷಸ್ಥಲ’ ಕಾದಂಬರಿಯ ರಚನೆಯ ವೇಳೆ ನೆರವೇರಿತು. ವೆಂಕಟೇಶ್ವರನ ಕುರಿತ ‘ವಕ್ಷಸ್ಥಲ’ ಕಾದಂಬರಿಯಲ್ಲಿ ಈ ಆಂಡಾಳುವಿನ ಕಥೆಯು ಉಪಕಥೆಯಾಗಿ ಬಂದಿದೆ. ಅದನ್ನು ಸ್ವಲ್ಪ ತಿದ್ದಿ, ಸೂಕ್ತವಾದ ಚಿತ್ರಗಳು ಹಾಗೂ ತಿರುಪ್ಪಾವೈ ಸಹಿತವಾಗಿ ಈ ಹೊತ್ತಿಗೆಯಲ್ಲಿ ಅಡಕಗೊಳಿಸಿದ್ದೇನೆ. ‘ಹೂಮಾಲೆಯಾದ ಆಂಡಾಳು’ ನೀಳ್ಗತೆಯು ಪೆರಿಯಾಳ್ವಾರರ ಮನೋಲಹರಿಯೊಂದಿಗೆ ತೆರೆದುಕೊಂಡು, ಆಂಡಾಳುವಿನ ಮನೋಲಹರಿ ಹಾಗೂ ಅವಳು ಶ್ರೀರಂಗನಾಥನಲ್ಲಿ ಐಕ್ಯಳಾಗುವವರೆಗೆ ಹರಡಿಕೊಂಡಿದೆ. ತಿರುಪ್ಪಾವೈ ಸಾರವನ್ನು ಅವಳದೇ ಮಾತುಗಳಲ್ಲಿ ನಿರೂಪಿಸಲಾಗಿದೆ. ಈ ಹೊಸ ನಿರೂಪಣೆಯ ಆಂಡಾಳುವಿನ ಕಥೆಯು ಓದುಗರಿಗೆ ಇಷ್ಟವಾಗಬಹುದೆಂದು ನಂಬುತ್ತೇನೆ.
ಪುಸ್ತಕ ಕೊಳ್ಳಲು ಆಸಕ್ತಿಉಳ್ಳವರು ಮೊಬೈಲ್ ಸಂಖ್ಯೆ 9008122991 ಕ್ಕೆ ಸಂಪರ್ಕಿಸಿ.

ಆಶಾ ರಘು