ಜ್ಯೋತಿರ್ಭೀಮೇಶ್ವರ ವ್ರತ ಮತ್ತು ಆಚರಣೆ…

ಜ್ಯೋತಿರ್ಭೀಮೇಶ್ವರ ವ್ರತ ಮತ್ತು ಆಚರಣೆ…

ಭಾರತೀಯ ಹಿಂದೂ ಧರ್ಮದಲ್ಲಿ ಅನೇಕ ವಿಶಿಷ್ಟ ಆಚರಣೆಗಳು ಮತ್ತು ಅವುಗಳ ಹಿಂದೆ ಹಲವು ಅರ್ಥಗಳು ಒಳಗೊಂಡಿರುತ್ತವೆ. ಇಲ್ಲಿನ ಪ್ರತೀ ಹಬ್ಬಗಳು ಮತ್ತೆ ವ್ರತಗಳು ವಿಶೇಷ. ಅದರಂತೆ ಆಷಾಢ ಮಾಸದ ಅಂತ್ಯದ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯ, ಜ್ಯೋತಿರ್ಭೀಮೇಶ್ವರ ವ್ರತ, ಸ್ತಂಭ ಗೌರಿ ಪೂಜೆ ಅಥವಾ ಪತಿ ಸಂಜೀವಿನಿ ವ್ರತ ಎಂದು ವಿವಿಧ ಹೆಸರುಗಳಲ್ಲಿ ಕರ್ನಾಟಕದಲ್ಲಿ ಆಚರಿಸುತ್ತಾರೆ. ಈ ವ್ರತವನ್ನು ದೇಶದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸುತ್ತಾರೆ. 2026 ರಲ್ಲಿ ಈ ಹಬ್ಬ ಬುಧವಾರ ಆಗಸ್ಟ್ 12ರಂದು ಆಚರಿಸಲಾಗುತ್ತದೆ.

ಸ್ಕಂದ ಪುರಾಣದಲ್ಲಿ ಇದರ ಬಗ್ಗೆ ಒಂದು ಕಥೆಯಿದೆ. ಒಬ್ಬ ಮಹಾರಾಜನ ತನ್ನ ಸುಗುಣವಂತ ಮತ್ತು ಧರ್ಮಶಾಲಿ ಮಗನಿಗೆ ಅಪಮೃತ್ಯುವಿನಿಂದ ಕಳೆದುಕೊಳ್ಳುತ್ತಾನೆ. ಆದರೆ ಆ ರಾಜ ರಾಣಿಗೆ ತನ್ನ ಮಗನ ಮದುವೆಯನ್ನು ನೋಡುವ ಆಸೆಯಿತ್ತು. ಅಷ್ಟರಲ್ಲೇ ಮಗನ ಪ್ರಾಣ ಹೋಗಿತ್ತು. ಹೆಣಕ್ಕೇನೆ ವಿವಾಹ ಮಾಡೋಣ ಎಂದು ನಿರ್ಧಾರ ಮಾಡಿ ತಮ್ಮ ರಾಜ್ಯದ ತುಂಬಾ, ತಮ್ಮ ಮಗನನ್ನು ಮದುವೆ ಆದವರಿಗೆ ತುಂಬಾ ಕಾಣಿಕೆ ಮತ್ತು ಬಹುಮಾನಗಳನ್ನು ಕೊಡುವುದಾಗಿ ಸಾರುತ್ತಾರೆ. ಒಬ್ಬ ಬಡ ಬ್ರಾಹ್ಮಣ ತನ್ನ ಮಗಳನ್ನ ಕೊಡುವುದಾಗಿ ಮುಂದೆ ಬರುತ್ತಾನೆ. ತನ್ನೊಬ್ಬಳ ತ್ಯಾಗದಿಂದ ತನ್ನ ಮನೆಯ ಉಳಿದೆಲ್ಲರೂ ಸುಖವಾಗಿರಬಹುದೆಂದು ಯೋಚಿಸಿ ಆ ಹೆಣ್ಣುಮಗಳು ಒಪ್ಪಿ ಮದುವೆಯಾಗುತ್ತಾಳೆ. ಅದ್ದೂರಿ ವಿವಾಹ ಮುಗಿದ ನಂತರ ಆ ಯುವರಾಜನ ಶವ ಸಂಸ್ಕಾರಕ್ಕೆಂದು ಸ್ಮಶಾನಕ್ಕೆ ಹೋಗಿದ್ದಾಗ ಜೋರು ಮಳೆ ಬಂದು ಎಲ್ಲರೂ ಅಲ್ಲಿಂದ ಹೋಗುತ್ತಾರೆ. ಆ ದಿನ ಆಷಾಢದ ಕೃಷ್ಣ ಪಕ್ಷ ಅಮಾವಾಸ್ಯೆ. ಯುವರಾಣಿ ಮತ್ತು ಯುವರಾಜನ ಶವ ಇಬ್ಬರೇ ಅಲ್ಲಿ. ಆಗ ಮರದ ಬೇರನ್ನೇ ಬತ್ತಿಯಾಗಿಸಿ ಮಣ್ಣಿನಲ್ಲಿ ದೀಪ ಮಾಡಿ ಮರದ ಉದುರಿದ ಒಣಗಿದ ಎಲೆಗಳನ್ನೇ ಹೂವೆಂದು ಭಾವಿಸಿ ಭಕ್ತಿಯಿಂದ ಶಿವ ಮತ್ತು ಪಾರ್ವತಿಯನ್ನು ಪ್ರಾರ್ಥಿಸಿ ಪೂಜಿಸುತ್ತಾಳೆ. ಆಗ ಶಿವಶಕ್ತಿಯು ಯುವರಾಣಿಯ ಭಕ್ತಿಗೆ ಪ್ರಸನ್ನರಾಗಿ, ಪ್ರತ್ಯಕ್ಷವಾಗಿ ಏನು ವರ ಬೇಕೆಂದು ಕೇಳು ಎಂದಾಗ, ಆಕೆ ತನ್ನ ಗಂಡನ ಜೀವವನ್ನು ಬೇಡಿದಳಂತೆ. ಆದ್ದರಿಂದ ದೇವರ ಆಶೀರ್ವಾದದಿಂದ ಮರಣ ಹೊಂದಿದ ಯುವರಾಜ ಮತ್ತೆ ಮರುಜೀವ ಪಡೆದು ಆ ಇಬ್ಬರು ಮರಳಿ ರಾಜ್ಯಕ್ಕೆ ಬಂದು ಸಂತೋಷವಾಗಿ ಅನ್ಯೋನ್ಯ ಜೀವನ ನಡೆಸುತ್ತಾರಂತೆ.

ಇದರಂತೆ ನಮ್ಮ ಪ್ರತೀ ಹೆಣ್ಣುಮಕ್ಕಳು ಈ ದಿನ ತನ್ನ ಗಂಡ ಮತ್ತು ಕುಟುಂಬದ ಅರೋಗ್ಯ, ಶ್ರೇಯಸ್ಸು, ಮತ್ತು ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತ ಶಿವ ಪಾರ್ವತಿಯರನ್ನು ದೀಪದ ಮೂಲಕ ಆರಾಧಿಸುವ ಹಬ್ಬವೇ ಜ್ಯೋತಿರ್ಭೀಮೇಶ್ವರ ಅಥವಾ ಸ್ತಂಭ ಗೌರಿ ವ್ರತ ಹಬ್ಬ. ಈ ಮೂಲಕ ಹೆಣ್ಣೇ ಒಂದು ಕುಟುಂಬದ ಆಧಾರ ಸ್ತಂಭ ಎಂಬುದನ್ನು ನಮ್ಮ ಹಿರಿಯರು ಸಾರಿದ್ದಾರೆ. ಅರ್ಥಪೂರ್ಣವಾಗಿ, ” ವಸುದೈವ ಕುಟುಂಬಕಂ ” ಎಂದರೆ “ಇಡೀ ಜಗತ್ತೇ ಒಂದು ಕುಟುಂಬ” ಎಂಬಂತೆ ನಾವೆಲ್ಲರೂ ಹಬ್ಬವನ್ನು ಆಚರಿಸಿ ಇಡೀ ಜಗದ ಒಳಿತಿಗಾಗಿ ಪ್ರಾರ್ಥಿಸೋಣ. ಹಬ್ಬದ ಶುಭಾಶಯಗಳು…

ಪಲ್ಲವಿ ಚೆನ್ನಬಸಪ್ಪ

Related post