ಎಲ್ಲರೊಳಗೊಂದಾಗು – ಮಕ್ಕಳಿಗಾಗಿ ಡಿವಿಜಿ

ಎಲ್ಲರೊಳಗೊಂದಾಗು – ಮಕ್ಕಳಿಗಾಗಿ ಡಿವಿಜಿ

ಪುಸ್ತಕ : ಎಲ್ಲರೊಳಗೊಂದಾಗು – ಮಕ್ಕಳಿಗಾಗಿ ಡಿವಿಜಿ
ಲೇಖಕರು – ಸತ್ಯೇಶ್ ಎನ್ ಬೆಳ್ಳೂರ್
ಚಿತ್ರಗಳು – ಬಿ.ಜಿ.ಗುಜ್ಜಾರಪ್ಪ
ಪ್ರಕಟಣೆ : ಡಿವಿಜಿ ಬಳಗ ಪ್ರತಿಷ್ಠಾನ, ಮೈಸೂರು

ನಾವೆಲ್ಲರೂ ಡಿವಿಜಿಯವರ ಅನೇಕ ಲೇಖನಗಳನ್ನು ಓದಿದ್ದೇವೆ. ಏನಿಲ್ಲವಾದರೂ ಅವರು ಬರೆದ ಕಗ್ಗಗಳನ್ನಾದರೂ ಓದಿರುತ್ತೇವೆ ಇಲ್ಲಾ ಕೇಳಿರುತ್ತೇವೆ. ಬರೆದಂತೆಯೇ ಬದುಕಿದ ಅವರ ಬದುಕು- ಬರೆಹ ಎರಡನ್ನೂ ಈ ಪುಸ್ತಕದಲ್ಲಿ ಮಕ್ಕಳಿಗಾಗಿ ಎಂದು ಬರೆದಿದ್ದರೂ, ದೊಡ್ಡವರಿಗೂ ಡಿವಿಜಿ ಅವರನ್ನು ಅರಿಯಲು ಈ ಕೃತಿ ನೆರವಾಗುತ್ತದೆ‌.

ಡಿವಿಜಿಯವರ ಎಷ್ಟೇ ಬರೆಹಗಳನ್ನು ಓದಿದ್ದರೂ ಅವರ ಬಗ್ಗೆ, ಅವರ ಬರೆಹಗಳ ಬಗ್ಗೆ ನಾವು ಅರಿತಿರುವುದು ಸಾಗರದ ಒಂದು ಹನಿಯಷ್ಡು ಮಾತ್ರ ಎಂದಾಗುತ್ತದೆ. ಆದರೆ ಈ ಪುಸ್ತಕದಲ್ಲಿ ಅವರ ಹಿರಿಯರಿಂದ ಹಿಡಿದು ಅವರ ಬಾಲ್ಯ, ಅವರ ಓದು, ಜೀವನೋಪಾಯಕ್ಕಾಗಿ ಅವರು ಮಾಡಿದ ಕೆಲಸಗಳು, ಅವರ ಜೀವನ ಕ್ರಮ, ಅವರು ಒಡನಾಡಿದ ಜನರು, ಅವರು ಬರೆದ ಕೃತಿಗಳು, ಅವರಿಗೆ ಸಂದ ಪ್ರಶಸ್ತಿಗಳು ಹೀಗೆ ಈ ಪುಸ್ತಕದಲ್ಲಿ ವಿವರವಾಗಿ ನಾವು ಓದಿದಾಗ ಸಾಗರದ ಕೆಲವು ಹನಿಗಳನ್ನಾದರೂ ಪಡೆದ ಸಾರ್ಥಕ ಭಾವ ನಮ್ಮಲ್ಲಿ ಮೂಡದೇ ಇರದು.

ಸರಳ ಪದಗಳಲ್ಲಿ, ಸಣ್ಣ ಸಣ್ಣ ವಾಕ್ಯಗಳಲ್ಲಿ ರಚಿಸಿರುವ ಕೃತಿ ದೊಡ್ಡ ಸಾಹಿತಿಯನ್ನು ಚಿಕ್ಕ ಮಕ್ಕಳಿಗೆ ಅರ್ಥವಾಗುವಂತೆ ಆಸಕ್ತಿದಾಯಕವಾಗಿ ರಚಿಸಿರುವುದಕ್ಕೆ ಲೇಖಕರು ನಿಜಕ್ಕೂ ಅಭಿನಂದನಾರ್ಹರು. ಹೀಗೆ ಇನ್ನಿತರ ಸಾಹಿತಿಗಳ, ಪ್ರಮುಖರ ಕಥೆಗಳನ್ನು ಹೇಳಿದಲ್ಲಿ ಮಕ್ಕಳಿಗೆ ನಮ್ಮ ಹಿರಿಯರನ್ನು , ಅವರ ಕಾಲದ ರೀತಿ ನೀತಿಗಳನ್ನೂ, ಅವರ ಸಾಧನೆಗಳನ್ನೂ, ಕಷ್ಟ ಸಹಿಷ್ಣುತೆಯನ್ನೂ, ಮಾನವನ ಜೀವನದ ನಿಜವಾದ ಧ್ಯೇಯ ಏನಾಗಿರಬೇಕು, ಪ್ರಾಮಾಣಿಕತೆ ಎಂದರೇನು ಎನ್ನುವ ಬಹಳಷ್ಟು ಸಂಗತಿಗಳನ್ನು ಅರಿತುಕೊಳ್ಳಲು ಸಹಾಯಕವಾಗುತ್ತದೆ.

ಮಕ್ಕಳಿಗಾಗಿ ಕಾಮಿಕ್ ರೂಪದಲ್ಲಿ ಬಂದಿರುವ ಡಿವಿಜಿಯವರ ವಿವರಕ್ಕೆ ತಕ್ಕ ಹಾಗೆ ತುಂಬಾ ಸುಂದರವಾದ ಚಿತ್ರಗಳನ್ನು ಶ್ರೀ. ಬಿ ಜಿ ಗುಜ್ಜಾರಪ್ಪ ಅವರು ರಚಿಸಿರುವುದರಿಂದ ಈ ಬರಹಗಳು ಮಕ್ಕಳಿಗೆ ಆಪ್ತವೆನಿಸುತ್ತದೆ.

ಶಾಲೆಯಲ್ಲಿ ಗುರುಗಳು ಮಕ್ಕಳೊಡನೆ ನಡೆಸುವ ಸಂವಾದ ರೂಪದಲ್ಲಿ ಬರೆದಿರುವ ಈ ಪುಸ್ತಕದಲ್ಲಿ ಮಕ್ಕಳೂ ಕೂಡಾ ಡಿವಿಜಿಯವರ ಬಗ್ಗೆ ತಮಗೆ ತಿಳಿದ ವಿಷಯಗಳನ್ನು ಚರ್ಚಿಸಿರುವಂತೆ ಬರೆದಿರುವುದು ತುಂಬಾ ಚೆನ್ನಾಗಿ ಮೂಡಿಬಂದಿದೆ.

ಡಿವಿಜಿಯವರ ಪೂರ್ವಜರ ಊರಾದ “ಮಂಜಾಪುತ್ತೂರು” ಎಂಬ ಊರಿನ ಅರ್ಥ, “ಮಂಜಾ” ಎಂದರೆ ದರ್ಭೆ ಎಂದೂ “ಪುತ್ತ” ಎಂದರೆ ಹುತ್ತ ಎಂದೂ, ಅಂದರೆ ಹುತ್ತದ ಹಾಗೆ ಹಳ್ಳಿಯ ತುಂಬಾ ದರ್ಭೆ ಬೆಳೆದಿದ್ದರಿಂದ ಆ ಹೆಸರು ಹಳ್ಳಿಗೆ ಬಂತೆಂದೂ, ನಮ್ಮ ಪೂರ್ವಿಕರು ಹೆಸರಿಡುತ್ತಿದ್ದ ರೀತಿಯನ್ನು ಸರಳವಾಗಿ ಇಲ್ಲಿ ತಿಳಿಸಿದ್ದಾರೆ.

ಮದ್ರಾಸಿನಿಂದ ಬೆಂಗಳೂರಿಗೆ ಬರುತ್ತಿದ್ದ ಬ್ರಿಟಿಷ್‌ ಸೈನ್ಯಕ್ಜೆ ಮುಳಬಾಗಿಲು ಒಂದು ತಂಗುಸ್ಥಾನವಾಗಿದ್ದು. ಆ ಸೈನಿಕರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸುವ ಕೆಲಸ ಡಿವಿಜಿಯವರ ಮನೆತನದ್ದಾಗಿದ್ದೆಂದು ನಮಗಿಲ್ಲಿ ತಿಳಿಯುತ್ತದೆ.

ಡಿವಿಜಿ ಯವರಿಗೆ ಬಾಲ್ಯದಲ್ಲಿ ಅಕ್ಷರಾಭ್ಯಾಸ ಶಾಲೆಯಲ್ಲಿ ನೆಲದ ಮೇಲೆ ಮರಳನ್ನು ಹರಡಿ ಬೆರಳುಗಳಿಂದ ಅಕ್ಷರಗಳನ್ನು ಮೂಡಿಸುವ ಮೂಲಕ ಆಯಿತೆಂದೂ, ಏಳನೇ ತರಗತಿಯನ್ನು ಮುಗಿಸಿ ನಂತರ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿ ಹೈಸ್ಕೂಲಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರೆಂದೂ ಆದರೆ ಮನೆಯಲ್ಲಿ ಹಿರಿಯರ ಸಾವು, ವ್ಯಾಪಾರದಲ್ಲಿ ನಷ್ಟ, ಬೇಸಾಯದಲ್ಲಿ ಹಾನಿಯಾಗಿದ್ದರಿಂದ ಅವರು ಓದನ್ನು ನಿಲ್ಲಿಸಿ ಮುಳುಬಾಗಿಲಿಗೆ ಹಿಂತಿರುಗಿ ಬಂದು ಮನೆಯ ಕಡೆಗೆ ಗಮನ ಕೊಟ್ಟರೆಂದೂ, ಒಂದು ವರ್ಷದ ಬಳಿಕ ಕೋಲಾರದಲ್ಲಿ ಹೈಸ್ಕೂಲಿಗೆ ಸೇರಿದರೂ ಅನಾರೋಗ್ಯದ ಕಾರಣ ಓದಲಾಗದೇ, ಮತ್ತೆ ಪರೀಕ್ಷೆಗೆ ಕುಳಿತರೂ ಅವರು ಕನ್ನಡ, ಗಣಿತ, ವಿಜ್ಞಾನ ವಿಷಯಗಳಲ್ಲಿ ನಪಾಸಾದರು ಎಂಬ ವಿಷಯವನ್ನು ಮಕ್ಕಳಿಗಿರಲಿ, ನಮಗೂ ನಂಬಲಾಗುವುದಿಲ್ಲ.

ಆದರೆ ಒಟ್ಟು ಕುಟುಂಬದಲ್ಲಿ ಬೆಳೆದ ಡಿವಿಜಿಯವರಿಗೆ ಅವರ ಚಿಕ್ಕಜ್ಜನವರಿಂದ ಮನೆಯನ್ನು ನಡೆಸುವ ಮತ್ತು ಕರ್ತವ್ಯವನ್ನು ನಿಭಾಯಿಸುವ ರೀತಿಯೂ, ಅಜ್ಜಿ (ತಾಯಿಯ ತಾಯಿ) ಅವರಿಂದ ರಾಮಾಯಣ, ಮಹಾಭಾರತದ ಕತೆಗಳು, ದೇವರನಾಮಗಳು, ಭಗವದ್ಗೀತೆಯನ್ನೂ, ಸೋದರಮಾವನವರಿಂದ ಕಲಿತ ಮಗ್ಗಿ, ಕನ್ಡಡದ ಗುರುಗಳಾದ ಚಂದ್ರಶೇಖರ ಶಾಸ್ತ್ರಿಗಳಿಂದ ಕಾವ್ಯದ ಕುರಿತು ಆಸಕ್ತಿ, ಇಂಗ್ಲಿಷ್ ಅಧ್ಯಾಪಕರಾದ ಕೆ. ವಿ ರಾಮಸ್ವಾಮಯ್ಯರ್ ಅವರಿಂದ ಕಲಿತ ಇಂಗ್ಲಿಷ್ ಭಾಷೆಯ ವಿಶೇಷತೆ, ಹೀಗೆ ಅನೇಕರಿಂದ ಕಲಿತ ಪಾಠ ಅವರ ಜೀವನಕ್ಕೆ ಮಾರ್ಗದರ್ಶಿಯಾಗಿರುವುದು ನಮಗಿಲ್ಲಿ ತಿಳಿದು ಬರುತ್ತದೆ. ಅಷ್ಟೇ ಅಲ್ಲದೆ ಪಠ್ಯೇತರ ಓದಿನಲ್ಲಿ ಅಪಾರ ಆಸಕ್ತಿಯಿದ್ದ ಅವರು ಸ್ವಪ್ರಯತ್ನದಿಂದ ಕನ್ನಡ. ಇಂಗ್ಲಿಷ್ ಭಾಷೆಗಳಲ್ಲಿ ಹಿಡಿತ ಸಾಧಿಸಿದ್ದು, ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಕೊಂಡಿದ್ದು, ಸಂಗೀತ, ನೃತ್ಯ ಹಾಗು ಕಲೆಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಅವರು ತಿಳಿದುಕೊಂಡ ಬಗ್ಗೆ ನಮಗಿಲ್ಲಿ ಅರಿವಾಗುತ್ತದೆ.

ಮನೆಯ ಜವಾಬ್ದಾರಿ ಹೊತ್ತ ಅವರು ಮಾಡಿದ ಕೆಲಸಗಳು ಒಂದೆರಡಲ್ಲ, ಜೀವನೋಪಾಯಕ್ಕಾಗಿ ಕಂಪನಿ ಏಜೆಂಟ್ ಕೆಲಸ, ಗ್ರಾಮ ಪಂಚಾಯಿತಿಯಲ್ಲಿ ಪಟೇಲ ವೃತ್ತಿ, ಪುರೋಹಿತ ವೃತ್ತಿ, ಸಬ್ ರಿಜಿಸ್ಟ್ರಾರ ಕಛೇರಿಯಲ್ಲಿ ಸರ್ಕಾರಿ ಕಾಗದ ಮಾರುವ ಕೆಲಸ, ಸೋಡಾ ಕಾರ್ಖಾನೆಯಲ್ಲಿ ಗುಮಾಸ್ತನ ಕೆಲಸಗಳನ್ನು ಮಾಡಿ ಬೇಸತ್ತು ಕೊನೆಗೆ ಬೆಂಗಳೂರಿಗೆ ಬಂದು, ಜಟಕಾ ಗಾಡಿಗಳಿಗೆ ಬಣ್ಣ ಬಳಿಯುವ ಕೆಲಸವನ್ನೂ ಅವರು ಮಾಡಿದ್ದರು ಎಂಬುದನ್ನು ಓದಿದಾಗ ಕೆಲಸಕ್ಕಾಗಿ ಅವರು ಕಷ್ಟಪಟ್ಟರೂ ಎಲ್ಲವನ್ನೂ ಎದುರಿಸಿ ನಿಂತ ಅವರ ಬಗ್ಗೆ ಹೆಮ್ಮೆಯೆನಿಸುತ್ತದೆ.

ಹದಿನೇಳನೆ ವರ್ಷಕ್ಕೆ ಮದುವೆಯಾದ ಅವರಿಗೆ ಮೂವರು ಮಕ್ಕಳೆಂಬುದೂ, ಅವರ ಮನೆಯಲ್ಲಿ ಎಷ್ಟು ಬಡತನವಿತ್ತೆಂಬುದಕ್ಕೆ ಇಲ್ಲಿ ತಿಳಿಸಿರುವ ಒಂದು ಪ್ರಸಂಗವನ್ನು ಓದುವ ಓದುಗರ ಕಣ್ಣೊದ್ದೆಯಾಗದೇ ಇರದು.

ಕೊನೆಗೆ ಅವರು “ನವರತ್ನ ಪ್ರೆಸ್” ನಲ್ಲಿ ಪತ್ರಕರ್ತರಾಗಿ ಕೆಲಸ ಪ್ರಾರಂಭಿಸುತ್ತಾರೆ. “ಸೂರ್ಯೋದಯ ಪ್ರಕಾಶಿಕಾ” ಪತ್ರಿಕೆಗೆ ಕನ್ನಡದಲ್ಲಿ ಬರೆಯುತ್ತಲೇ “ಈವನಿಂಗ್ ಮೇಲ್” ಎಂಬ ಆಂಗ್ಲ ಪತ್ರಿಕೆಗೂ ಡಿವಿಜಿಯವರು ಲೇಖನ ಬರೆಯುತ್ತಿದ್ದರೆಂಬ ವಿಷಯ ತಿಳಿಯುತ್ತದೆ. ಅಷ್ಟೇ ಅಲ್ಲದೆ ಅವರು ಬರೆದ ಲೇಖನಗಳನ್ನು ಓದಿದ್ದ ಮೈಸೂರಿನ ದಿವಾನರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯರವರು ಡಿವಿಜಿಯವರಿಗೆ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ದೇಶಸೇವೆ ಮಾಡಲು ಕರೆಯಿತ್ತ ವಿಷಯ ಇಲ್ಲಿ ತಿಳಿಯಬಹುದು.

ಡಿವಿಜಿಯವರು ” ಮೈಸೂರ್ ಟೈಮ್ಸ್ ” ಪತ್ರಿಕೆಯ ಉಪಸಂಪಾದಕರಾಗಿದ್ದಾಗ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿ ನಿಲಯದ ಮೆಸ್ಸಿನಲ್ಲಿ ಆದ ಒಂದು ಹಣದ ಹಗರಣವನ್ನು ಬಯಲು ಮಾಡಿ ಒಂದು ಲೇಖನವನ್ನು ಬರೆಯುತ್ತಾರೆ, ಮಿಸ್ಟರ್ ಟೇಟ್‌ ಎಂಬ ಬ್ರಿಟಿಷ್ ಅಧಿಕಾರಿ ಆಗ ಆ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದರು ಅವರು ಪತ್ರಿಕೆಯ ಸಂಪಾದಕರಿಗೆ ಬೆದರಿಸಿ ತಪ್ಪೊಪ್ಪಿಗೆ ಪತ್ರವನ್ನು ಪ್ರಕಟಿಸುತ್ತಾರೆ, ಇದರಿಂದ ನೊಂದ ಡಿವಿಜಿ ಅವರು ತಮ್ಮ ಬದುಕಿನ ಧ್ಯೇಯವನ್ನು ಬಿಟ್ಟು ಕೊಡದೆ ” ನಾವು ಬರೆದದ್ದು ಸತ್ಯ, ನಾವು ಹೆದರಬಾರದಿತ್ತು, ಕೋರ್ಟಿನಲ್ಲಿ ಗೆಲ್ಲಬೇಕಿತ್ತು. ಹೀಗೆ ತಪ್ಪೊಪ್ಪಿಗೆ ಬರೆದುದು ತರವಲ್ಲ” ಎಂದು ಹೇಳಿ ಆ ಕೆಲಸಕ್ಕೇ ರಾಜೀನಾಮೆ ನೀಡಿದ್ದು ಅವರು ಅವರ ಸಿದ್ಧಾಂತಕ್ಕೆ ನೀಡುತ್ತಿದ್ದ ಗೌರವ ಎಂದರೆ ತಪ್ಪಾಗಲಾರದು.

ಮುಂದೆ ಅವರು “ಮೈಸೂರು ಎಕನಾಮಿಕ್ ಜರ್ನಲ್” ಪತ್ರಿಕೆಯ ಸಂಪಾದಕರಾಗುತ್ತಾರೆಂದೂ, ಅವರಿಗೆ ರಾಜಕೀಯದಲ್ಲಿ ಪ್ರಭಾವ ಬೀರಿದವರು ದಾದಾಭಾಯಿ ನವರೋಜಿ, ಸರ್ ಎಮ್ ವಿಶ್ವೇಶ್ವರಯ್ಯ, ಮತ್ತು ಗೋಪಾಲಕೃಷ್ಣ ಗೋಖಲೆ ಎಂಬುದನ್ನು ನಾವಿಲ್ಲಿ ನೋಡಬಹುದು. ಅಷ್ಟೇ ಅಲ್ಲದೆ ಅವರ ಸಾರ್ವಜನಿಕ ಸೇವೆಗೆ ಅವರಿಗೆ ಪ್ರೇರಣೆ ನೀಡಿದವರು ವಾಜಪೇಯಂ ವೆಂಕಟಸುಬ್ಬಯ್ಯನವರು ಮತ್ತು ಎನ್ ನರಸಿಂಹಮೂರ್ತಿಗಳೆಂದೂ ತಿಳಿಯುತ್ತದೆ.

ಸ್ವಾತಂತ್ರ್ಯ ಹೋರಾಟದಲ್ಲಿಯೂ ಡಿವಿಜಿಯವರು ಪತ್ರಿಕೆಗಳಿಗೆ ಅನೇಕ ಲೇಖನಗಳನ್ನು ಬರೆಯುವುದರ ಮೂಲಕ ಜನತೆಗೆ ಮತ್ತು ಸರ್ಕಾರಗಳಿಗೆ ಅನೇಕ ವಿಚಾರಗಳ ಕುರಿತು ಅರಿವು ಮೂಡಿಸಿದ ಬಗ್ಗೆ ನಮಗಿಲ್ಲಿ ತಿಳಿಯುತ್ತದೆ. ಅಷ್ಟೇ ಅಲ್ಲದೆ ಅವರು ಮುನಿಸಿಪಲ್ ಕೌನ್ಸಿಲ್ ಆಗಿ ಎಂಟು ವರ್ಷಗಳು, ಎಮ್ ಎಲ್ ಸಿ ಅಗಿ ಹದಿನಾಲ್ಕು ವರ್ಷಗಳು ಕಾರ್ಯನಿರ್ವಹಿಸಿ ನಾಗರೀಕರ ತೊಂದರೆಗಳನ್ನು ಪರಿಹರಿಸಲು ಶ್ರಮಿಸಿದ್ದರ ಬಗ್ಗೆ ತಿಳಿಯುತ್ತದೆ. ಅಷ್ಟೇ ಅಲ್ಲದೆ ಅವರಿಗೂ ಸರ್ಕಾರದ ಮಂತ್ರಿಗಳಾದ ಬ್ರಿಟಿಷ್ ಅಧಿಕಾರಿಗೂ ಭಿನ್ನಾಭಿಪ್ರಾಯ ಬಂದಾಗ ” ಸರ್ಕಾರ ನನ್ನನ್ನು ನೇಮಿಸಿದೆ ಅಂದ ಮಾತ್ರಕ್ಕೆ ನಾಗರೀಕರ ಹಿತದ ಪರವಾದ ನನ್ನ ಸಿದ್ಧಾಂತಗಳಿಗೆ ನಾನೆಂದೂ ರಾಜಿ ಮಾಡಿಕೊಳ್ಳಲಾರೆ” ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಮೊದಲಿಗಿಂತಲೂ ಹೆಚ್ಚು ಜನಹಿತ ಕೆಲಸಗಳನ್ನು ಮಾಡಿದ್ದನ್ನು ಓದಿದಾಗ, ಇಂದಿನ ರಾಜಕೀಯ ದೊಂಬರಾಟ ನೆನಪಾಗಿ ಓದುಗರ ಮನಸ್ಸು ಭಾರವಾಗದೇ ಇರದು.

ಇದೆಲ್ಲದರ ನಡುವೆ ಅವರು ಸರ್ಕಾರದ ಪಠ್ಯಪುಸ್ತಕ ಸಮಿತಿ, ಕನ್ನಡ ನಿಘಂಟು ಸಮಿತಿ, ಮೈಸೂರು ರಾಜ್ಯಾಂಗ ಸುಧಾರಣಾ ಸಮಿತಿಯ ಸದಸ್ಯರಾಗಿಯೂ, ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಮೆಂಬರ್ ಆಗಿಯೂ ಇದ್ದದ್ದಲ್ಲದೆ, ಪತ್ರಿಕಾ ವೃತ್ತಿಯನ್ನೂ ಮುಂದುವರೆಸಿ, ಮೈಸೂರು ಪತ್ರಕರ್ತರ ಸಂಘವನ್ನು ಹುಟ್ಟುಹಾಕಿದ್ದು ತಿಳಿದಾಗ ಅವರ ಸಂಘಟನಾ ಶಕ್ತಿಯ ಅರಿವು ನಮಗಾಗುತ್ತದೆ.

ಗಾಂಧೀಜಿಯವರು ಬೆಂಗಳೂರಿಗೆ ಬಂದಾಗ ಅವರ ಪ್ರವಾಸ, ವಸತಿ ಪೂರೈಕೆಯ ಜವಾಬ್ದಾರಿಯನ್ನು ಡಿವಿಜಿಯವರಿಗೆ ವಹಿಸಲಾಗಿತ್ತೆಂಬುದು ಡಿವಿಜಿಯವರ ಜವಾಬ್ದಾರಿಯುತ ನಡವಳಿಕೆಯನ್ನು ತೋರಿಸುತ್ತದೆ. ಹಾಗೆಯೇ ಸರ್ ಎಂ ವಿ ಅವರು ಡಿವಿಜಿಯವರ ಮನೆಗೆ ಹೋಗಿ ಸರ್ಕಾರಿ ಕೆಲಸಗಳ ವಿಷಯವಾಗಿ ಸಲಹೆ ಪಡೆಯುತ್ತಲಿದ್ದರೆಂದೂ, ಅದಕ್ಕೆ ಹಣ ಕೊಡಲು ಹೋದರೆ ಅದನ್ನು ಪಡೆಯದೆ “ದಿವಾನರೆ, ದೇಶಸೇವೆಗೆ ಹಣ ಪಡೆದರೆ ಹೇಗೆ ? ಇದು ನನ್ನ ಸಿದ್ಧಾಂತ ” ಎನ್ನುತ್ತಿದ್ದದ್ದೂ. ಅವರ ಮನೆಯ ಕಡೆಯೂ ಅಷ್ಟೇನೂ ಅನುಕೂಲವಿಲ್ಲದಿದ್ದರೂ ಹಣ ಪಡೆದಿರಲಿಲ್ಲ. ಆದರೆ ಸರ್ ಎಂ ವಿ ಬಲವಂತವಾಗಿ ಕೊಟ್ಟ ಚೆಕ್ಕನ್ನು ಪಡೆದರೂ ಅದನ್ನು ಬ್ಯಾಂಕಿನಲ್ಲಿ ಹಾಕಿ ಹಣ ಪಡೆಯದೇ, ಯಾವುದೋ ಪುಸ್ತಕದಲ್ಲಿ ಇಟ್ಟು ಮರೆತದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ.

ಅವರಿಗೆ ಮೂವತ್ತಾರು ವರ್ಷವಾಗಿದ್ದಾಗ, ಬೆಂಕಿ ಅಪಘಾತದಲ್ಲಿ ಡಿವಿಜಿಯವರ ಪತ್ನಿ ಭಾಗೀರತಮ್ಮ ಮೃತರಾದಾಗ ತಮ್ಮ ಮೂರು ಚಿಕ್ಕ ಮಕ್ಕಳನ್ನು ಹಾಗೂ ವಿಧವೆಯಾಗಿದ್ದ ತನ್ನ ತಂಗಿಯನ್ನು ನೋಡಿಕೊಳ್ಳುತ್ತಿದ್ದ ಇವರಿಗೆ ಮರುಮದುವೆಯಾಗಲು ಸಂಬಂಧಿಕರು ಬಲವಂತ ಪಡಿಸಿದಾಗ ” ನನ್ನ ತಂಗಿ ವಿಧವೆಯಾಗಿದ್ದಾಳೆ ಅವಳಿಗೆ ಮೊದಲು ಗಂಡು ನೋಡಿ ಮದುವೆ ಮಾಡಿ, ಅವಳಿಗಿಲ್ಲದ ಸುಖ ನನಗೇಕೆ?” ಎಂದಿದ್ದರೆಂದೂ, ಆ ಕಾಲದಲ್ಲಿ ವಿಧವಾ ವಿವಾಹಕ್ಕೆ ಅವಕಾಶವಿರಲಿಲ್ಲವಾಗಿ, ಹಾಗೆ ಮದುವೆಯಾಗುವವರಿಗೆ ಇವರೇ ಪುರೋಹಿತರಾಗಿ ಅನೇಕ ವಿಧವಾ ವಿವಾಹಗಳನ್ನು ನಡೆಸಿಕೊಟ್ಟಿರುವುದು ಅವರ ಸಾಮಾಜಿಕ ಕಳಕಳಿಯನ್ನು ತೋರಿಸುತ್ತದೆ.

ಡಿವಿಜಿಯವರು ಸಾಹಿತ್ಯ, ರಾಜಕೀಯ, ಕಲೆ, ಸಂಸ್ಕೃತಿ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಲು ಅವರು ಸೇರಿದ್ದ ಸಂಘ ಸಂಸ್ಥೆಗಳಾವುದು ಎಂಬುದೂ, ವಾರ್ ಲೋನ್ ಬಾಂಡ್ ಗಳ ಮಾರಾಟದಲ್ಲಿ ಅವರು ಹಣ ಸಂಗ್ರಹಿಸಿದ್ದೂ, ಯುದ್ಧದ ಸಮಯದಲ್ಲಿ ಒದಗುವ ಅಪಾಯವನ್ನು ಎದುರಿಸಲು ಜನರಲ್ಲಿ ಧೈರ್ಯ ತುಂಬಲು ಇವರು ರಚಿಸಿದ ಸಂಸ್ಥೆ ” ಸೆಲ್ಫ್ ಪ್ರೊಟೆಕ್ಷನ್ ಲೀಗ್ ” ಬಗ್ಗೆಯೂ ನಮಗಿಲ್ಲಿ ತಿಳಿಯುತ್ತದೆ.

ಕನ್ನಡ ಸಾಹಿತ್ತ ಪರಿಷತ್ತಿನ ಉಪಾಧ್ಯಕ್ಷರಾಗಿ ಐದು ವರ್ಷ ಸೇವೆ ಸಲ್ಲಿಸಿದಾಗ ಅವರು ಹಮ್ಮಿಕೊಂಡ ಅನೇಕ ಕಾರ್ಯಕ್ರಮದ ವಿವರಗಳನ್ನು ನಾವಿಲ್ಲಿ ಕಾಣಬಹುದು. ಹಾಗೆಯೇ ಮಡಿಕೇರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾಡಿದ ಭಾಷಣ ಕನ್ನಡ ಸಾಹಿತ್ಯದ ಕುರಿತಾಗಿ ನೀಡಿರುವ ಶ್ರೇಷ್ಠ ಉಪನ್ಯಾಸಗಳಲ್ಲಿ ಒಂದು ಎಂಬುದು ತಿಳಿಯುತ್ತದೆ‌

ಹಾಗೆಯೇ ಗೋಪಾಲಕೃಷ್ಣ ಗೋಖಲೆಯವರ ಹೆಸರಿನಲ್ಲಿ 1945 ರಲ್ಲಿ ಡಿವಿಜಿಯವರು “ಗೋಖಲೆ ಸಾರ್ವಜನಿಕ ಸಂಸ್ಥೆ” ಯನ್ನು ಸ್ಥಾಪಿಸಿ ಅಧ್ಯಕ್ಷಪೀಠದಲ್ಲಿ ಭಗವಂತನಾದ ಶ್ರೀ ರಾಮಚಂದ್ರನನ್ನು ಸ್ಥಾಪಿಸಿ, ತಾವು ಕಾರ್ಯದರ್ಶಿಯಾಗಿ ಸಾಹಿತ್ಯ ಸೇವೆ ಮಾಡಿದ ಮಹನೀಯರು ಇವರು. ಇಂದಿಗೂ ಈ ಸಂಸ್ಥೆಯಲ್ಲಿ ಅದೇ ಪರಂಪರೆ ಮುಂದುವರೆಯುತ್ತಿರುವುದು ಶ್ಲಾಘನೀಯ. ಅಷ್ಟೇ ಅಲ್ಲದೆ ತಮಗೆ ಸನ್ಮಾನದ ರೂಪದಲ್ಲಿ ದೊರಕಿದ ಬಹುದೊಡ್ಡ ಮೊತ್ತವನ್ನೂ ಗೋಖಲೆ ಸಂಸ್ಥೆಗೆ ನೀಡಿದ ಡಿವಿಜಿಯವರು ಎಂದಿಗೂ ಆದರ್ಶಪ್ರಾಯರು.

ಇಲ್ಲಿ ನಾವು ಡಿವಿಜಿವರು ಬರೆದಿರುವ ದೇವರು, ಋತ, ಸತ್ಯ, ಧರ್ಮ, ಜೀವನ ಧರ್ಮಯೋಗ, ಬಾಳಿಗೊಂದು ನಂಬಿಕೆ, ಮುಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ, ಉಮರನ ಒಸಗೆ, ಅಂತಃಪುರ ಗೀತೆಗಳು, ವಸಂತ ಕುಸುಮಾಂಜಲಿ, ನಿವೇದನ, ಕೇತಕೀವನ, ಶ್ರೀ ರಾಮ ಪರೀಕ್ಷಣಂ, ಶ್ರೀ ಕೃಷ್ಣ ಪರೀಕ್ಷಣಂ, ಶೃಂಗಾರ ಮಗಳಂ, ಡಿವಿಜಿ ಅವರು ಭೇಟಿಯಾದ ಅನೇಕ ಸಜ್ಜನರ ಮತ್ತು ಅವರಿಂದ ಕಲಿತ ಪಾಠಗಳ ಕುರಿತಾಗಿ ಬರೆದ ಜ್ಙಾಪಕ ಚಿತ್ರಶಾಲೆ, ಇಷ್ಟೇ ಅಲ್ಲದೆ ಅವರು ರಚಿಸಿದ ನಾಟಕಗಳು, ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ, ಕನ್ನಡ ಸಾಹಿತ್ಯದ ಬಗ್ಗೆ ಅದರ ಕುರಿತಾದ ಉಪನ್ಯಾಸದ ಬಗ್ಗೆ , ಸಂಸ್ಕೃತಿಯ ಬಗ್ಗೆ, ಮಹಾಭಾರತದ ಮುಖ್ಯ ಪಾತ್ರಗಳ ಬಗ್ಗೆ, ಅವರು ಬರೆದ ಅನೇಕ ಪುಸ್ತಕಗಳನ್ನು ಬರೆದಿರುವುದು ನಮಗಿಲ್ಲಿ ತಿಳಿಯುತ್ತದೆ.

ಡಿವಿಜಿಯವರಿಗೆ ಸಂದ ಅನೇಕ ಪ್ರಶಸ್ತಿ, ಪುರಸ್ಕಾರಗಳಾದ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ, ಅವರ ನೆನಪಿನಲ್ಲಿ ಬಿಡುಗಡೆಯಾದ ಅಂಚೆಚೀಟಿ, ಹೀಗೆ ಅನೇಕ ಪುರಸ್ಕಾರಗಳ ಬಗ್ಗೆಯೂ ಇಲ್ಲಿ ಲೇಖಕರು ಹೇಳಿದ್ದಾರೆ.

ಎಲ್ಲರೊಳಗೊಂದಾಗು ಎಂಬುದನ್ನು ನುಡಿದಂತೆ ನಡೆದು ತೋರಿದ ಉದಾತ್ತ ಚಿಂತನೆಯಿದ್ದರೂ ಸರಳ ಜೀವನ ನಡೆಸಿ, ಸ್ವಾಭಿಮಾನಿಯಾಗಿ, ಸಮಾಜಮುಖಿಯಾಗಿದ್ದು, ಸ್ನೇಹ ಜೀವಿಯಾಗಿದ್ದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (ಡಿವಿಜಿ) ಅವರ ಬಗ್ಗೆ ಈ ಪುಸ್ತಕ ಓದುವಾಗ ಮನಸ್ಸು ತುಂಬಿಬಾರದೇ ಇರದು.

ಅವರ ಒಂದು ಜನಪ್ರಿಯ ಕಗ್ಗದೊಡನೆ ಈ ಲೇಖನ ಮುಗಿಸುತ್ತಾ, ಕನ್ನಡ ಇಂಗ್ಲಿಷ್ ಎರಡೂ ಭಾಷೆಯಲ್ಲಿ ಶ್ರೀ ಸತ್ಯೇಶ್ ಬೆಳ್ಳೂರ್ ಅವರು ಬರೆದಿರುವ ಈ ಹೊತ್ತಿಗೆ ಎಲ್ಲರ ಮನೆಯಲ್ಲೂ ಇರಲೇಬೇಕಾದುದೆಂಬುದು ನಿಸ್ಸಂಶಯ.

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು !
ಕಲ್ಲಾಗು ಕಷ್ಟಗಳ ಮಳೆಯವಿಧಿ ಸುರಿಯೆ !!
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ !
ಎಲ್ಲರೊಳಗೊಂದಾಗು – ಮಂಕುತಿಮ್ಮ !!

ಶ್ರೀವಲ್ಲಿ ಮಂಜುನಾಥ

Related post