ನೀ ಮಾಯೆಯೊಳಗೊ.. ನಿನ್ನೊಳು ಮಾಯೆಯೋ!?…

ನೀ ಮಾಯೆಯೊಳಗೊ.. ನಿನ್ನೊಳು ಮಾಯೆಯೋ!?…

ನೀ ಮಾಯೆಯೊಳಗೊ.. ನಿನ್ನೊಳು ಮಾಯೆಯೋ ಕನಕದಾಸರ ಪ್ರಮುಖ ಕೀರ್ತನೆಯ ಸಾಲಿದು. ಅವರು ಆಧ್ಯಾತ್ಮಿಕವಾಗಿ ಬೇರೆಯದೇ ಅರ್ಥ ಉದ್ದೇಶದಿಂದ ಹೇಳಿದ್ದರೂ, ಲೌಕಿಕವಾಗಿ ಪ್ರಸ್ತುತ ಕಾಲಮಾನಕ್ಕೆ ಸರಿಯಾಗಿ ಒಪ್ಪುವಂತ ಸಾಲುಗಳಿವು. ಈಗೀಗ ಅಂತರ್ಜಾಲದ ಸಾಮಾಜಿಕ ಜಾಲತಾಣಗಳ ಮಾಯಾಜಾಲಕ್ಕೆ ಸಿಲುಕದವರಿಲ್ಲ ಎನ್ನುವಂತಾಗಿದೆ.

ಸಣ್ಣ ಮಕ್ಕಳು ಮತ್ತು ಯುವಕರಿಂದ ಮುದುಕರವರೆಗೂ ಎಲ್ಲಾ ವಯಸ್ಸಿನ ಜನರು ಈ ಮಾಯಾಜಾಲದೊಳಗೆ ಸಿಲುಕಿರುವವರು ಸಿಗುತ್ತಾರೆ. ಆ ಮಾಯಾಜಾಲಾದೊಳಗೆ ಇವರಿದ್ದಾರೋ ಅಥವಾ ಅದೇ ಇವರನ್ನೆಲ್ಲ ಆವರಿಸಿದೆಯೋ ತಿಳಿಯದಷ್ಟು ಮುಳುಗಿದ್ದಾರೆ. ತತ್ಪರಿಣಾಮ ಮಾನಸಿಕ ಆರೋಗ್ಯ ಸಂಸ್ಥೆಗಳು ಬೀದಿಗೊಂದರಂತೆ ತಲೆ ಎತ್ತುತ್ತಿವೆ ಎಂದರೆ ತಪ್ಪಾಗಲಾರದು. ಸೋಶಿಯಲ್ ಮೀಡಿಯಾ ಕೆಟ್ಟದ್ದಲ್ಲ ಸ್ನೇಹಿತರೇ ಆದರೆ ಅದನ್ನ ಎಷ್ಟು, ಹೇಗೆ ಮತ್ತು ಯಾತಕ್ಕಾಗಿ ಬಳಸಬೇಕು ಎಂಬುದನ್ನು ಅರಿಯದೇ ಬಳಸುವುದು ಅನೇಕ ದುಷ್ಪರಿಣಾಮಗಳಿಗೆ ಕಾರಣ.

ಹಿಂದೆಲ್ಲ ಪರಿಚಯಸ್ಥರು, ಸಂಬಂಧಿಕರು ಅಪರೂಪಕ್ಕೊಮ್ಮೆ ಸಿಕ್ಕರೂ, ಬಂಧ ಎಷ್ಟೇ ಹಳೆತಾದರೂ ಆತ್ಮೀಯತೆ, ಹೊಂದಾಣಿಕೆ ಹೊಂದಿದ ಆ ಸಂಬಂಧಗಳು ನವ ಚೈತನ್ಯ ಕೊಡುವಂತ ಭಾವವಿರುತ್ತಿತ್ತು. ಈಗ ಎಲ್ಲರೂ ಬೆರಳ ತುದಿಯಲ್ಲೇ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು ಮಾತುಗಳು ಮಿತವಾಗಿವೆ. ಎದುರಿಗೆ ಸಿಕ್ಕರೆ ಭಾವಸ್ಪಂದನೆಗಳು ಕಮ್ಮಿಯಾಗಿದೆ. ಅಂತರ್ಜಾಲದಲ್ಲಿ ಸಾವಿರಾರು ಜನ ಸ್ನೇಹಿತ ಬಳಗವಿದ್ದರೂ, ಜನ ಏಕಾಂಗಿತನ ಅನುಭವಿಸುತ್ತ ಟೆನ್ಶನ್ ಡಿಪ್ರೆಷನ್ ಗಳಿಗೆ ಒಳಗಾಗಿ ಒಳಗೊಳಗೇ ನರಳುತ್ತಿದ್ದಾರೆ. ಸಣ್ಣ ಪುಟ್ಟ ವಿಷಯಗಳಿಗೂ ಕಿರಿಕಿರಿ ಮಾಡಿಕೊಳ್ಳುತ್ತಾ ತಾಳ್ಮೆ ಕಳೆದುಕೊಂಡು ವರ್ತಿಸುತ್ತ ಸುತ್ತ ಇರುವ ಬಂಧಗಳನ್ನ ದೂರ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಮೊದಲ ಕಾರಣ, ನಮ್ಮೊಳಗಿನ ಅರಿಯದ ಯಾವುದೋ ಕೊರತೆಯನ್ನು ನೀಗಿಸಿಕೊಳ್ಳಲು, ಅಥವಾ ಮುಚ್ಚಿ ಹಾಕಿಕೊಳ್ಳಲು ಹುಡುಕಿಕೊಳ್ಳುವ ದಾರಿಗಳು..! ಇತರರಲ್ಲಿ ತಪ್ಪುಗಳನ್ನು ಹುಡುಕುವುದು, ಅಥವಾ ಖಾಲಿ ಸಮಯವನ್ನು ಹೇಗೆ ಸದ್ಭಳಕೆ ಮಾಡಿಕೊಳ್ಳಲು ಗೊತ್ತಿಲ್ಲದೆ ಎಲ್ಲದಕ್ಕೂ ಆನ್ಲೈನ್ ಮೊರೆ ಹೋಗುವುದು. ಕೂತಿದ್ದು ನಿಂತಿದ್ದು, ತಿಂದಿದ್ದು ಸುತ್ತಿದ್ದು ಎಲ್ಲವನ್ನೂ ಇತರರಿಗೆ ತೋರಿಸಿಕೊಳ್ಳಲು ನಮ್ಮ ವೈಯಕ್ತಿಕ ಜೀವನವನ್ನು ಅತಿಯಾಗಿ ಸೋಶಿಯಲೈಜ್ ಮಾಡಿಕೊಳ್ಳುವುದು..!

ವಯಸ್ಸಿದ್ದಾಗ ಯಾರನ್ನೂ ಲೆಕ್ಕಿಸದೆ ಗೌರವಿಸದೆ ಮೆರೆದು, ಕೊನೆಗಾಲದಲ್ಲಿ ತನಗ್ಯಾರು ಇಲ್ಲವೆಂದು ಕೊರಗುವುದರಲ್ಲಿ ಯಾವ ಅರ್ಥವಿದೆ !? ಆದ್ದರಿಂದ ಸ್ನೇಹಿತರೇ ನಮಗೆ ಸಿಕ್ಕಿರುವ ಈ ಜೀವನ ಎಷ್ಟೋ ಜನರ ಕನಸು. ನಮ್ಮ ಜೀವನದ ಮೌಲ್ಯವನ್ನು ಅರಿತು, ಎಲ್ಲರೊಳು ಬೆರೆತು ಬದುಕುವುದನ್ನು ಕಲಿಯೋಣ. ಯಾರಿಂದ ನಮಗೇನು ಉಪಯೋಗ ಸಿಗುತ್ತದೆ ಎಂದು ಯೋಚಿಸುವ ಬದಲು ನಮ್ಮಿಂದ, ನಮ್ಮ ಸುತ್ತಲಿನವರಿಗೆ ಮತ್ತು ಸಮಾಜಕ್ಕೆ ಏನು ಒಳ್ಳೆಯ ಕೊಡುಗೆ ಕೊಡಲು ಸಾಧ್ಯ ಅದನ್ನು ಮಾಡೋಣ ಎಂದು ಹೊರಟಾಗ ಇಡೀ ಬ್ರಹ್ಮಾಂಡವೆ ನಮಗಾಗಿ ಮಿಡಿಯುತ್ತದೆಯಂತೆ. ಅದಕ್ಕಿಂತ ಹೆಚ್ಚಾಗಿ ಆತ್ಮತೃಪ್ತಿ ಕೊಡುವ ನೆಮ್ಮದಿ ಎಂತದ್ದು ಎಂಬುದು ಅರ್ಥವಾಗುತ್ತ ಹೋಗುತ್ತದೆ. ಯಾವುದೋ ಗೀಳಿನ ಹಿಂದೆ ಓಡಿ ಓಡಿ ಕಾಲು ಸೋತಾಗ ಯಾತಕ್ಕಾಗಿ ಇಷ್ಟೆಲ್ಲ ನಮ್ಮ ಹಾರಾಟ ಹೋರಾಟ? ಎಂಬ ಯೋಚನೆ ಬಂದಾಗ, ಒಂದು ಹಂತದ ನಂತರ ಬದುಕಿನಲ್ಲಿ ನೆಮ್ಮದಿ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿಯುತ್ತದೆ.

ಆದ್ದರಿಂದ ಅಂತರ್ಜಾಲದ ನಿಯಮಿತ ಮತ್ತು ಸರಿಯಾದ ಬಳಕೆಯ ಮಹತ್ವ ಅರಿತು ಬಳಸುತ್ತಾ, ದೈಹಿಕ ಮತ್ತು ಮಾನಸಿಕ ಅರೋಗ್ಯ ಕಾಪಾಡಿಕೊಂಡು ಒಂದು ಅದ್ಭುತವಾದ ಜೀವನ ಪ್ರತಿಕ್ಷಣ ಜೀವಿಸುವುದ ಕಲಿಯೋಣ ಮತ್ತು ಹೊರಡುವಾಗ ಸಂತೃಪ್ತಿಯಿಂದ ಈ ಬದುಕಿಗೆ ವಿದಾಯ ಹೇಳಿ ಹೋಗೋಣ ಅಲ್ಲವೇ…

ಪಲ್ಲವಿ ಚೆನ್ನಬಸಪ್ಪ

Related post