ಮಂಥರೆಯರಿದ್ದಾರೆ ಎಚ್ಚರಿಕೆ!!!
ಮಂಥರೆ ನಿರ್ಗತಿಕಳು, ಕೈಕೇಯಿಯ ವಿವಾಹ ಕಾಲದಲ್ಲಿ ದಾಸಿಯಾಗಿ ಅವಳ ಜೊತೆಯಲ್ಲಿಯೇ ಬಳುವಳಿಯಾಗಿ ಬಂದವಳು. ಕುಳ್ಳಾಗಿಯೂ, ಅಷ್ಟಾವಕ್ರಳಾಗಿಯೂ ಇದ್ದ ಅವಳಿಗೆ ಅರಮನೆಯ ಆಶ್ರಯ ದೊರೆತದ್ದು ಅವಳ ವಿಕಾರ ರೂಪದಿಂದಲೇ.
ದಶರಥನು ತನ್ನ ಹಿರಿಯ ಮಗ ರಾಮನಿಗೆ ಪಟ್ಟಾಭಿಷೇಕ ಮಾಡಲು ಯೋಚಿಸುತ್ತಿದ್ದಾನೆ ಎಂದು ಕೇಳಿದಾಗ ಅವಳು ಕೋಪಗೊಂಡು ಕೈಕೇಯಿಗೆ ಸುದ್ದಿಯನ್ನು ಹೇಳುತ್ತಾಳೆ. ಕೈಕೇಯಿ ಸಂತೋಷಪಡುತ್ತಾಳೆ ಮತ್ತು ಮಂಥರೆಗೆ ಮುತ್ತಿನ ಹಾರವನ್ನು ಕೊಡುತ್ತಾಳೆ. ಅದನ್ನು ಸ್ವೀಕರಿಸದ ಮಂಥರೆಯು ನಿನ್ನ ಮಗನನ್ನು ನಿನ್ನ ತವರಿಗೆ ಕಳುಹಿಸಿ, ಅವನಿಲ್ಲದೇ ಇರುವಾಗ ಇಲ್ಲಿ ರಾಮನ ಪಟ್ಟಾಭಿಷೇಕ ಮಾಡುತ್ತಿರುವುದು ದಶರಥನ ಪಿತೂರಿ ಎಂದು ನಂಬಿಸಿ, ಕೈಕೇಯಿಯ ಮನಸ್ಸು ಕೆಡಿಸಿ, ಭರತನಿಗೆ ಪಟ್ಟಾಭಿಷೇಕ ಆಗಬೇಕೆಂದೂ, ರಾಮನು ಹದಿನಾಲ್ಕು ವರ್ಷ ವನವಾಸಕ್ಕೆ ಹೋಗಬೇಕೆಂದು ದಶರಥನ ಬಳಿ ವಚನ ಪಡೆಯಲು ಪ್ರೇರೇಪಿಸುತ್ತಾಳೆ. ಕೈಕೇಯಿ ಹಾಗೆಯೇ ಮಾಡುತ್ತಾಳೆ. ಅದರಿಂದಾಗಿ ರಾಮ, ಸೀತೆ ಮತ್ತು ಲಕ್ಷ್ಮಣರು ಕಾಡಿಗೆ ಹೋಗಿ, ಅವರ ಅಗಲಿಕೆಯನ್ನು ಸಹಿಸಲಾಗದೆ ಧಶರಥ ಮರಣ ಹೊಂದುತ್ತಾನೆ. ಕೈಕೇಯಿಯ ತವರು ಮನೆಯಿಂದ ಬಂದ ಭರತ ತನ್ನ ತಾಯಿಯಿಂದಾದ ಕೃತ್ಯಕ್ಕೆ ಅವಳನ್ನು ನಿಂದಿಸುತ್ತಾನೆ, ಅವಳಿಂದ ದೂರವಾಗುತ್ತಾನೆ. ಸಂತೋಷವಾಗಿ ಗಂಡ, ಮಕ್ಕಳು, ಸೊಸೆಯರೊಡನೆ ಇದ್ದ ಕೈಕೇಯಿ, ಮಂಥರೆ ಮಾತಿಗೆ ಮರುಳಾಗಿ ಪ್ರೀತಿಸುವ ಗಂಡ, ಗೌರವಿಸುವ ಮಕ್ಕಳು ಎಲ್ಲರನ್ನೂ ಕಳೆದುಕೊಳ್ಳುತ್ತಾಳೆ. ಎಲ್ಲರ ದುಃಖಕ್ಕೆ ಕಾರಣಳಾಗುತ್ತಾಳೆ. ಅರಮನೆಯವರಲ್ಲದೆ ಪ್ರಜೆಗಳೆಲ್ಲರೂ ಅವಳನ್ನು ದೂಷಿಸುವಂತಾಗುತ್ತದೆ. ಇದಕ್ಕೆಲ್ಲಾ ಕಾರಣ ಹೇಳಿಕೆಯ ಮಾತು, ಸ್ವಂತ ಬುದ್ಧಿ ಇಲ್ಲದೇ ಇರುವುದು.

ಈಗಿನ ಕಾಲದಲ್ಲಿ ನಮ್ಮ ಸುತ್ತಮುತ್ತ ಮನೆ, ಕಛೇರಿ, ಸ್ನೇಹಿತರ ಬಳಗದಲ್ಲಿ, ಮಂಥರೆಯಂತಹ ಅನೇಕರಿರುತ್ತಾರೆ. ಅವರ ಮಾತುಗಳನ್ನು ಕೇಳಿದಾಗ ನಮ್ಮ ಒಳ್ಳೆಯದಕ್ಕೇ ಅವರು ಹೇಳುತ್ತಿದ್ದಾರೆ ಎನಿಸಿದರೂ, ಅವರ ಮಾತಿನಂತೆ ನಾವು ನಡೆದಾಗ ಆಗುವ ಪರಿಣಾಮವನ್ನು ಚಿಂತಿಸದೇ ಹೋದಲ್ಲಿ ನಮಗೂ ಕೈಕೇಯಿಯ ಪರಿಸ್ಥಿತಿ ಬಾರದೇ ಇರದು. ಅಂತಹವರ ಮನಸ್ಸಿನಲ್ಲಿ ನಮ್ಮ ಬಗ್ಗೆ ಕೋಪ, ಅಸೂಯೆ, ಹೊಟ್ಟೆಕಿಚ್ಚು ಹೀಗೆ ಅನೇಕ ಬಗೆಯ ನಕಾರಾತ್ಮಕ ಅಂಶಗಳಿದ್ದೂ, ಮೇಲೆ ಮಾತ್ರ ನಮ್ಮೊಡನೆ ಪ್ರೀತಿ, ವಿಶ್ವಾಸದಿಂದ ನಡೆದುಕೊಂಡು, ಸಮಯ ಬಂದಾಗ ನಮ್ಮನ್ನು ದಾರಿ ತಪ್ಪುವಂತೆ ಮಾಡುತ್ತಾರೆ. ಅಂತಹವರ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು. ನಮ್ಮ ನಡೆಯಿಂದ ಆಗುವ ಸಾಧಕ ಬಾಧಕಗಳನ್ನು ತಿಳಿದು ಅದರಂತೆ ನಡೆಯುವುದು ಉತ್ತಮ.

ಶ್ರೀವಲ್ಲಿ ಮಂಜುನಾಥ
ಬೆಂಗಳೂರು
M no 9019402295