ಚಿತ್ರಕಲಾಪ್ರದರ್ಶನ – ಸಂಸ್ಕಾರ ಭಾರತೀ ಕರ್ನಾಟಕ
ಸ್ವಾಭಿಮಾನ ಭಾರತ್ ಮತ್ತು ಸಂವಿಧಾನ75 – ಸಂಸ್ಕಾರ ಭಾರತೀ ಕರ್ನಾಟಕ (ನೋಂ) ದಕ್ಷಿಣ ಪ್ರಾಂತ ದೃಶ್ಯ ಕಲಾ ವಿಭಾಗವು ಮೇಲ್ಕಂಡ ಶೀರ್ಷಿಕೆಯಲ್ಲಿ ಆಯೋಜಿಸಿದ್ದ
ಚಿತ್ರಕಲಾಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ಶುಕ್ರವಾರ ಬೆಳಿಗ್ಗೆ ಖ್ಯಾತ ಕಲಾವಿದರಾದ ಶ್ರೀ ಚಂದ್ರನಾಥ ಆಚಾರ್ಯ ಅವರಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಬಸವನಗುಡಿಯಲ್ಲಿ ಉದ್ಘಾಟನೆಗೊಂಡಿತು. ದೃಶ್ಯ ಕಲಾ ವಿಭಾಗದ ಪ್ರಾಂತ ಕಲಾ ಸಂಯೋಜಕರಾದ ಹಾಗೂ ಉತ್ಕೃಷ್ಟ ಕಲಾವಿದರೂ ಆದ ಶ್ರೀ ಗಣಪತಿ ಹೆಗಡೆ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಈ ಕಲಾ ಪ್ರದರ್ಶನದಲ್ಲಿ ಎಪ್ಪತ್ತೈದು ಕಲಾವಿದರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಡಿನ ಶ್ರೇಷ್ಠ ಚಿತ್ರಕಲಾವಿದರಾದ ಶ್ರೀ ಚಂದ್ರನಾಥ ಆಚಾರ್ಯ ಅವರು “ಭಾರತೀಯ ಸಂಸ್ಕೃತಿಯ ನೆಲೆಗಳನ್ನು ಗಟ್ಟಿಗೊಳಿಸುವಲ್ಲಿ ಈ ಕಲಾಪ್ರದರ್ಶನದ ಹಿಂದಿರುವ ಶ್ರಮ, ಉದ್ದೇಶ ಅತ್ಯಂತ ಶ್ಲಾಘನೀಯವಾದದ್ದು, ರಾಷ್ಟ್ರೀಯತೆಗೆ ನಮ್ಮನ್ನು ಕೂಡ ಭಾವ ಸ್ಪಂದಿಸುವಂತೆ ಈ ಕಾರ್ಯಕ್ರಮಗಳು ಪ್ರೆರೇಪಿಸುತ್ತದೆ, ತನ್ನ 60 ವರ್ಷಗಳ ಕಲಾ ಪಯಣದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಪ್ರದರ್ಶನದ ಕಲಾಕೃತಿಗಳಲ್ಲಿ ಒಂದು ಗಟ್ಟಿತನ ಕಾಣುತ್ತಿತ್ತು, ನೈಪುಣ್ಯದ ಜೊತೆಯಲ್ಲಿ ಕಲಾವಿದರ ನಿಮ್ಮ ನಿಮ್ಮ ಒಳದನಿ, ಅರಿತುಕೊಂಡು ಕಲಾ ರಚನೆ ಮಾಡಿದಲ್ಲಿ ಇನ್ನೈದು ವರ್ಷಗಳಲ್ಲಿ ಪ್ರಬುದ್ಧ ಕಲಾವಿದರಾಗಿ ಹೊರಹೊಮ್ಮುವ ಭರವಸೆ ಕೂಡ ಇಲ್ಲಿ ಕಾಣಬಹುದು, ಈ ಪ್ರಯಾಣದಲ್ಲಿ ನಿಮಗೆಲ್ಲ ಯಶಸ್ಸು ಸಿಗಲಿ ಎಂದು ಹಾರೈಸುತ್ತಾ ಈ ಕಾರ್ಯಕ್ರಮವನ್ನು ನಾವೆಲ್ಲ ಸಂಭ್ರಮಿಸೋಣ” ಎಂದು ಖ್ಯಾತ ಕಲಾವಿದರಾದ ಶ್ರೀ ಚಂದ್ರನಾಥ ಆಚಾರ್ಯ ಅವರು ತಿಳಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಯುವ ಚಿತ್ರಕಲಾವಿದರು ಹಾಗೂ ಪ್ರಾಂತ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹೇಮಂತ್ ಜನಾರ್ದನ ರಾವ್ ಅವರು “ಸಂಸ್ಕಾರ ಭಾರತೀ ಕಳೆದ ನಲವತ್ತು ವರ್ಷಗಳಲ್ಲಿ ದೇಶದಾದ್ಯಂತ ಲಲಿತ ಕಲೆಗಳ ಸಂವರ್ಧನೆಗೆ ಶ್ರಮಿಸುತ್ತಿರುವ ರಾಷ್ಟ್ರೀಯ ಸಂಸ್ಥೆಯಾಗಿದೆ, ಸಾ ಕಲಾ ಯಾ ವಿಮುಕ್ತಯೇ ಎಂಬ ಧ್ಯೇಯ ವಾಕ್ಯದಂತೆ ಮಾನವನ ಜೀವನಕ್ಕೆ ಕಲೆ ಅತ್ಯಂತ ಪೂರಕ ಹಾಗೂ ಪೋಷಕ ಎಂಬುದನ್ನು ತಿಳಿಸುತ್ತ, ದೇಶದ ಸಂವಿಧಾನಕ್ಕೆ 75 ವರ್ಷಗಳ ಈ ಸಂಭ್ರಮದ ಸಮಯದಲ್ಲಿ ಈ ಕಾರ್ಯಕ್ರಮವನ್ನು ಪ್ರಾಂತ ದೃಶ್ಯ ಕಲಾ ವಿಭಾಗವು ಪ್ರತಿಭಾವಂತ ಕಲಾವಿದರಾದ ಶ್ರೀ ಗಣಪತಿ ಹೆಗಡೆ ಅವರ ನೇತೃತ್ವದಲ್ಲಿ ಆಯೋಜಿಸಿ 75 ಕಲಾಕೃತಿಗಳನ್ನು 75 ಕಲಾವಿದರನ್ನು ಜೋಡಿಸಿ ಆಯೋಜಿಸಿರುವುದು ಅತ್ಯಂತ ಶ್ಲಾಘನೀಯ” ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಚಿತ್ರಕಲಾವಿದರಾದ ಶ್ರೀ ಭಾಸ್ಕರ್ ರಾವ್ ಅವರು ಮಾತನಾಡುತ್ತ “ಸ್ವಾಭಿಮಾನ ಭಾರತ್ ಮತ್ತು ಸಂವಿಧಾನ 75 ದ್ವಂದ್ವ ವಿಷಯಗಳು ವಿಷಯಾಂತರವಾದಾಗ ಕಲಾವಿದನಿಗೆ ಇರುವ ಗೊಂದಲದಲ್ಲೂ ಅದ್ಭುತ ಕಲಾಕೃತಿಗಳು ಪ್ರದರ್ಶನಗೊಂಡಿವೆ” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮತ್ತೊಬ್ಬ ಮುಖ್ಯ ಅತಿಥಿಗಳಾದ ಕೇಂದ್ರ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಚಿ.ಸು. ಕೃಷ್ಣಸೆಟ್ಟಿಯವರು ಮಾತನಾಡಿ “ನಮ್ಮ ದೇಶದ ಸಾವಿರಾರು ವರ್ಷಗಳ ಪುರಾತನ ಇತಿಹಾಸ, ಸಂಸ್ಕೃತಿ, ಪರಂಪರೆ, ವೈಭವ, ಅತ್ಯಂತ ಉತ್ಕೃಷ್ಟವಾದದ್ದು, ಆದರೆ ಮೊಘಲರ ಮತ್ತು ಬ್ರಿಟೀಷ್ ರ ಆಳ್ವಿಕೆಯಿಂದಾಗಿ ನಮ್ಮ ಸಂಸ್ಕೃತಿಯನ್ನು ಹತ್ತಿಕ್ಕುವ ಕೆಲಸಗಳು ಮತ್ತು ದಬ್ಬಾಳಿಕೆಗಳು ವ್ಯವಸ್ಥಿತವಾಗಿ ನಡೆಯಿತು, ನಮ್ಮ ನೆಲದಲ್ಲಿ ನಮ್ಮ ಕಲೆಯನ್ನು ಪ್ರೆರೇಪಿಸದೆ ವಿದೇಶಿ ಸಂಸ್ಕೃತಿ, ವಿದೇಶಿ ಕಲೆ ಬಿಂಬಿಸುವ ಪ್ರಯತ್ನ ನಡೆಯಿತು, ನಮ್ಮ ಸಂಸ್ಕೃತಿ ಬಗ್ಗೆ ನಮಗೆ ಕೀಳರಿಮೆ ಬರುವಂತೆ ಪ್ರತಿಬಿಂಬಿಸಲಾಯಿತು, ಸ್ವಾತಂತ್ರ್ಯ ಬಂದ ನಂತರವೂ ಅದೇ ಮನಸ್ಥಿತಿ ಮುಂದುವರೆದಿದ್ದು ವಿಪರ್ಯಾಸ, ಭವ್ಯ ಭಾರತ ಕಲ್ಪನೆಯಲ್ಲಿ ಕಲಾ ಶಾಲೆಗಳು ಪ್ರಾರಂಭವಾದರೂ ಗುರು ಶಿಷ್ಯ ಪರಂಪರೆಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದು ದುರದೃಷ್ಟಕರ, ಅಂಬೇಡ್ಕರ್ ರವರ ವಿಚಾರಗಳನ್ನು, ಯೋಚನೆಗಳನ್ನು ತಿರುಚಿದರು, ಅದೇ ಸಂವಿಧಾನವನ್ನು ಗೌರವಿಸುತ್ತಾ ಸ್ವಾಭಿಮಾನದಿಂದ ಮುನ್ನಡೆಯೋಣ” ಎಂದರು.
ಸಂಸ್ಕಾರ ಭಾರತೀ ಪ್ರಾಂತ ಅಧ್ಯಕ್ಷರಾದ ಶ್ರೀ ಸುಚೇಂದ್ರ ಪ್ರಸಾದ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ “ನಮ್ಮ ಚಿತ್ರಕಲೆಯಂತ ಬಲವಾದ ಅಭಿವ್ಯಕ್ತಿ ಕಲಾಮಾದ್ಯಮ, ನಮ್ಮಲ್ಲಿರುವ ಕೆಲವು ತವಕ, ತಲ್ಲಣಗಳನ್ನು ತಾಕಲಾಟಗಳನ್ನ ತಹತಹಗಳನ್ನ, ಸಂವಾದಿಸುವ ಬಲವಾದ ಪ್ರಬಲ ಮಾದ್ಯಮ, ಬಾಹ್ಯ ಪ್ರಚೋದನೆ ಎಷ್ಟಿದ್ದರೂ ನಮ್ಮ ಅಂತರಾತ್ಮದ ಎಚ್ಚರಿಕೆಯ ಅರಿವು ಇರಬೇಕು, ಇರುವೆಗಳ ಹಾಗೆ ನಿಧಾನವಾಗಿ ಹೆಜ್ಜೆ ಇಡುತ್ತಾ ಯೋಜನ ದೂರ ಸಾಗಿ ಯೋಜನೆ ಸಾಧಿಸಬೇಕು, ಸ್ವಾಭಿಮಾನವೊಂದಿದ್ದರೆ ಹೆಳವ ಕೂಡ ಪರ್ವತ ಏರಬಲ್ಲ
ನಮ್ಮ ನೆಲದಲ್ಲಿ ನಾವು ಅನ್ಯರಾಗದೆ ಮಾನ್ಯರಾಗುವ ದಿನಗಳು ಕಾಣುವಂತಾಗಬೇಕು” ಎಂದರು.

ಸಂಸ್ಕಾರ ಭಾರತೀ ಕರ್ನಾಟಕ, ದಕ್ಷಿಣ ಪ್ರಾಂತ ಕಲಾ ಸಂಯೋಜಕರಾದ ಶ್ರೀ ಗಣಪತಿ ಎಸ್ ಹೆಗಡೆ ಎಲ್ಲರನ್ನೂ ಸ್ವಾಗತಿಸಿದರು. ಕೊಬಾಲ್ಟ್ ಭಾವ ಸ್ಪಂದನ ತಂಡದವರು ಸುಶ್ರಾವ್ಯವಾಗಿ ದೇಶಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಶ್ರೀ ವಿಜಯ ಅಥಣಿಕರ್ ಅವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಪದ್ಮಿನಿ ಓಕ್ ಅವರು ಎಲ್ಲರನ್ನೂ ವಂದಿಸಿದರು. ಎಲ್ಲಾ ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಬೆಳಿಗ್ಗೆ ಶ್ರೀಮತಿ ಶಾಲಿನಿ ಮತ್ತು ಶ್ರೀಮತಿ ಪೂಜಾ ಅವರಿಂದ ಸುಂದರವಾಗಿ ರಂಗೋಲಿ ಹಾಕುವುದರಿಂದ ಶುರುವಾದ ಕಾರ್ಯಕ್ರಮ ಮಧ್ಯಾಹ್ನ ಹೊಳಿಗೆ ಊಟದ ತನಕ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿತ್ತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ರಾಷ್ಟ್ರೀಯತೆಯಿಂದ ತುಂಬಿ ತುಳುಕುತ್ತಿತ್ತು.
ಈ ಕಲಾಪ್ರದರ್ಶನದಲ್ಲಿ ಎಪ್ಪತ್ತೈದು ಕಲಾವಿದರ 75 ಕಲಾಕೃತಿಗಳು ಅನೇಕ ಸಂದೇಶಗಳನ್ನು ಹೊತ್ತು ಭಾರತ ದರ್ಶನದಂತೆ ಗೋಚರಿಸುತ್ತಿತ್ತು. ಒಂದು ಬೃಹತ್ ಗ್ರಂಥ ಓದಿದ ಅನುಭವ ನೀಡುತ್ತಿತ್ತು.
ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಶ್ರೀ ಹರಿರಾಮ್ ವಿ, ಶ್ರೀ ಭಾಸ್ಕರರಾವ್, ಶ್ರೀ ಚಂದ್ರನಾಥ್ ಆಚಾರ್ಯ, ಶ್ರೀ ಎ ಎಮ್ ಪ್ರಕಾಶ್, ಶ್ರೀ ವೇಣುಗೋಪಾಲ್ ವಿ ಜಿ, ಶ್ರೀ ನಂಜುಂಡಸ್ವಾಮಿ ಇವರೆಲ್ಲರ ಕಲಾಕೃತಿಗಳು ಪ್ರದರ್ಶನದ ಘನತೆಯನ್ನು ಹೆಚ್ಚಿಸಿತ್ತು.
ಪ್ರಕಟಣೆ
ಸಾಹಿತ್ಯಮೈತ್ರಿ