ರಾಷ್ಟ್ರಕವಿ ಕುವೆಂಪು ಒಂದು ಕಿರು ನೋಟ – ಪುಸ್ತಕ ಪರಿಚಯ
ಲೇಖಕಿ ಮಾನಸ ರವರು ಆರು ಕಾದಂಬರಿಗಳನ್ನು, ಐದು ಕವನ ಸಂಕಲಗಳನ್ನು, ಒಂದು ಸಂಶೋಧನಾ ಕೃತಿಯನ್ನು, ನಾಲ್ಕು ಜೀವನ ಚರಿತ್ರಗಳನ್ನು, ಮಕ್ಕಳಿಗಾಗಿ ಮೂರು ಪುಸ್ತಕಗಳನ್ನು ಬರೆದಿದ್ದಲ್ಲದೆ 14 ಕೃತಿಗಳನ್ನು ಸಂಪಾದಿಸಿದ್ದಾರೆ, ಅಷ್ಟೇ ಅಲ್ಲದೆ ಇನ್ನಿತರ ಎಂಟು ಕೃತಿಗಳನ್ನು ಅವರು ಬರೆದಿದ್ದಾರೆ ಹಾಗೆ ಇತರರೊಡನೆ ಸೇರಿ ಇವರು ಸಂಪಾದಿಸಿರುವ ಐದು ಕೃತಿಗಳು ಪ್ರಕಟಣೆ ಕಂಡಿವೆ.
ಲೇಖಕಿ ಸ್ವತಃ ಹೇಳಿರುವಂತೆ ಈ ಪುಸ್ತಕವು ಕುವೆಂಪು ಅವರನ್ನು ಆಳವಾಗಿ ಅಧ್ಯಯನ ಮಾಡಿ ಅರೆದು ಕುಡಿದಿರುವವರಿಗಾಗಿ ಅಲ್ಲ. ಇದು ಕುವೆಂಪು ಅವರನ್ನು ಅರ್ಥ ಮಾಡಿಕೊಳ್ಳಲು ಬಯಸುವವರಿಗಾಗಿ. ಅವರ ಮೊದಲ ಓದಿಗಾಗಿ. ಮಕ್ಕಳಿಗೆ ಸಿಹಿಯ ರುಚಿ ತೋರಿಸಿ ನಂತರ ಅವರೇ ಸಿಹಿಯನ್ನು ಅರಸಿ ಹೋಗುವಂತೆ ಮಾಡುವ ಚಾಕಚಕ್ಯತೆಯನ್ನು ಇಲ್ಲಿ ಲೇಖಕರು ಮಾಡಿದ್ದಾರೆ.
ಈ ಪುಸ್ತಕಗಳನ್ನು ಎರಡು ಭಾಗಗಳನ್ನು ಮಾಡಲಾಗಿದೆ ಮೊದಲ ಭಾಗದಲ್ಲಿ ಕುವೆಂಪು ಅವರ ಬದುಕು, ಬರೆಹ, ಸಾಹಿತ್ಯ, ಸಾಧನೆಗಳನ್ನೆಲ್ಲಾ ಶ್ರೀಸಾಮಾನ್ಯರಿಗೆ ಎಷ್ಟು ಬೇಕು ಅಷ್ಟೇ ನೀಡಲಾಗಿದೆ. ಇದನ್ನು ಓದಿದವರಿಗೆ ಆ ನಂತರ ಕುವೆಂಪು ಬಗ್ಗೆ ಇನ್ನೂ ಹೆಚ್ಚಿಗೆ ತಿಳಿದುಕೊಳ್ಳಬೇಕೆಂಬ ಹಂಬಲ ಮೂಡುವಂತಿದೆ. ಹಾಗೆಯೇ ಎರಡನೇ ಭಾಗದಲ್ಲಿ ಕುವೆಂಪು ಅವರ ಬಗೆಗಿನ ಹತ್ತಾರು ಮಾಹಿತಿಗಳನ್ನು ಸರಳವಾಗಿ ದಾಖಲಿಸಿದ್ದಾರೆ. ಅವರ ಮೊಟ್ಟ ಮೊದಲ ಕವಿತೆ ” ಪೂವೆ” ಇಲ್ಲಿದೆ. ಹಾಗೆಯೇ ಅವರ ಹಸ್ತಾಕ್ಷರದಲ್ಲಿ “ಶರತ್ಕಾಲದ ಸೂರ್ಯೋದಯದಲ್ಲಿ” ಎಂಬ ಪದ್ಯವಿದೆ. ಸಮಾಜಕ್ಕೆ ಮಂತ್ರ ಮಾಂಗಲ್ಯವನ್ನು ಓದಿಸಿದ ಕುವೆಂಪು ಅವರು ತಮ್ಮ ಮಗನ ಮದುವೆಯನ್ನು ಹೇಗೆ ಮಾಡಿದ್ದರು ಎಂಬುದನ್ನು ನಾವಿಲ್ಲಿ ತಿಳಿಯಬಹುದು. ಮಂತ್ರ ಮಾಂಗಲ್ಯದ ಪೂರ್ಣಪಾಠವೂ ಇಲ್ಲಿದೆ.. ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ವಿವಾಹ ಸಂದರ್ಭದಲ್ಲಿ ಕುವೆಂಪು ಅವರು ತಮ್ಮ ಹಸ್ತಾಕ್ಷರದಲ್ಲಿ ಬರೆದ ಆಹ್ವಾನ ಪತ್ರವನ್ನು ಇಲ್ಲಿ ನೀಡಲಾಗಿರುವುದು ಪುಸ್ತಕದ ಮೌಲ್ಯ ಹೆಚ್ಚಿಸುವಂತಿದೆ.

ಕುವೆಂಪು ಅವರ ಬಹು ಮಹತ್ವದ ವಿಶ್ವಮಾನವ ಸಂದೇಶ, ವಿಶ್ವಮಾನವ ಗೀತೆ, ನಾಡಗೀತೆ ಹಾಗೂ ರೈತ ಗೀತೆಗಳನ್ನು ಲೇಖಕಿಯು ಇಲ್ಲಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಅವರ ಅನೇಕ ಜನಪ್ರಿಯ ಕವನಗಳನ್ನು ಉಲ್ಲೇಖಿಸುತ್ತಾ ಅದರ ಬಗ್ಗೆ ಸೊಗಸಾದ ವಿವರಣೆಯನ್ನೂ ಕೊಟ್ಟಿರುವುದು ಓದುಗರಿಗೆ ರಸಗವಳದಂತಿದೆ.
ಕುವೆಂಪುರವರ ಆತ್ಮಚರಿತ್ರೆಯಾದ “ನೆನಪಿನ ದೋಣಿಯಲ್ಲಿ” ಕೃತಿಯ ಬಗ್ಗೆ ಬರೆದಿರುವ ಅನೇಕ ವಿಚಾರಗಳು ಓದುಗರಿಗೆ ಅವರನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುವಂತಿದೆ. ರಾಜಕುಮಾರ ಜಯಚಾಮರಾಜ ಒಡೆಯರ್ ಅವರಿಗೆ ಮನೆ ಪಾಠ ಹೇಳಬೇಕೆಂದು ಅರಮನೆಯಿಂದ ಕರೆ ಬಂದಾಗ “I have got better business than teaching prince” ಎಂದು ನಿರಾಕರಿಸಿದರು ಎಂಬ ಪ್ರಸಂಗವನ್ನೂ ನಾವಿಲ್ಲಿ ಕಾಣಬಹುದು.
ಕುವೆಂಪು ಅವರು ಬರೆದ ಹನ್ನೆರಡು ನಾಟಕಕಗಳಲ್ಲಿ ಮುಖ್ಯವಾದ ಜಲಗಾರ, ಯಮನ ಸೋಲು, ಬಿರುಗಾಳಿ, ರಕ್ತಾಕ್ಷಿ,, ಬೆರಳ್ ಗೆ ಕೊರಳ್ ಹೀಗೆ ಹಲವು ಕೆಲವು ನಾಟಕಗಳ ಮುಖ್ಯಾಂಶಗಳನ್ನು ಇಲ್ಲಿ ನೀಡಿ ಓದುಗರಲ್ಲಿ ಆಸಕ್ತಿ ಮೂಡುವಂತೆ ಲೇಖಕಿ ಮಾಡಿದ್ದಾರೆ.
ಕುವೆಂಪು ಅವರು ಮಹಾಕವಿ ಅಷ್ಟೇ ಅಲ್ಲ ಮಹಾ ಭಾಷಣಕಾರರೂ ಆಗಿದ್ದರು ಎಂಬುದನ್ನು ತಿಳಿಸುವ ಸಲುವಾಗಿ ಕುವೆಂಪು ಅವರಿಗೆ ರಾಷ್ಟ್ರಕವಿ ಹಾಗೂ ಜ್ಞಾನಪೀಠ ಪ್ರಶಸ್ತಿಗಳು ಬಂದ ಸಂದರ್ಭದಲ್ಲಿ ಅವರು ಮಾಡಿದ ಎರಡು ಅದ್ಭುತವಾದ ಭಾಷಣಗಳನ್ನು ಲೇಖಕಿ ಇಲ್ಲಿ ನೀಡಿದ್ದಾರೆ. ಹಾಗೆಯೇ ಅವರು ಬರೆದ ಎರಡು ಮಹಾ ಕಾದಂಬರಿಗಳಾದ “ಕಾನೂರು ಸುಬ್ಬಮ್ಮ ಹೆಗ್ಗಡತಿ” ಮತ್ತು “ಮಲೆಗಳಲ್ಲಿ ಮದುಮಗಳು ” ಇವುಗಳ ಸಂಕ್ಷಿಪ್ತ ಪರಿಚಯವೂ ಓದುಗರಿಗಾಗುತ್ತದೆ.
ಕುವೆಂಪು ಬರಿಯ ಕವಿ, ಕಾದಂಬರಿಕಾರ, ಕಥೆಗಾರರಾಗಿರದೆ ಶ್ರೇಷ್ಠ ವಿಮರ್ಶಕರೂ ಆಗಿರುವುದು ಇಲ್ಲಿ ತಿಳಿಯುತ್ತದೆ. ವಿಭೂತಿ ಪೂಜೆ, ರಸೋವೈಸಃ, ದ್ರೌಪದಿಯ ಶ್ರೀಮುಡಿ, ತಪೋನಂದನ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಮತ್ತು ಕಾವ್ಯ ವಿಹಾರ ಎಂಬ ಪ್ರಬಂಧಗಳನ್ನು ಅವರು ಬರೆದ ಬಗ್ಗೆಯೂ ಇಲ್ಲಿ ವಿವರವಿದೆ. ಶ್ರೀ ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದ ಇವರ ಜೀವನ ಚರಿತ್ರೆಯನ್ನು ಕುವೆಂಪು ಅವರು ಬರೆದಿರುವು ನಮಗಿಲ್ಲಿ ತಿಳಿಯುತ್ತದೆ.ಅಷ್ಟೇ ಅಲ್ಲದೇ ವಾಲ್ಮೀಕಿ ರಾಮಾಯಣದ ಕಥೆಯನ್ನು ಗದ್ಯ ರೂಪದಲ್ಲಿ ಜನಪ್ರಿಯ ವಾಲ್ಮೀಕಿ ರಾಮಾಯಣ ಎಂಬ ಕೃತಿಯನ್ನು ಅವರು ಬರೆದ ಬಗ್ಗೆ ಇಲ್ಲಿ ತಿಳಿಸಿದ್ದಾರೆ.
ಕುವೆಂಪು ಅವರು ರಚಿಸಿದ ಮಕ್ಕಳ ಸಾಹಿತ್ಯದ ಬಗ್ಗೆಯೂ ಇಲ್ಲಿ ಚಿಕ್ಕದಾಗಿ ಅಷ್ಟೇ ಚೊಕ್ಕದಾಗಿ ವಿವರಿಸಿದ್ದಾರೆ. ಜೊತೆಗೆ ಕುವೆಂಪು ಅವರ ಇನ್ನಿತರ ಕೃತಿಗಳ ಬಗ್ಗೆಯೂ ಓದುಗರು ತಿಳಿಯಬಹುದಾಗಿದೆ.
ಕುವೆಂಪು ಹೆಚ್ಚು ಶಿಸ್ತಿನ ವ್ಯಕ್ತಿಯಾಗಿದ್ದ ಬಗ್ಗೆ, ಅವರು ತಾವು ಇರುವವರೆಗೂ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಸಮನಾಗಿ ಕಾಪಾಡಿಕೊಂಡು ಬಂದಿದ್ದ ಬಗ್ಗೆ, ಹಾಗೂ ಅವರಿಗೆ ಯಾವುದೇ ದುರಭ್ಯಾಸಗಳಿಲ್ಲದೆ ಇರುವುದರ ಬಗ್ಗೆ ಲೇಖಕರು ಇಲ್ಲಿ ತಿಳಿಸುತ್ತಾ, . ಕುವೆಂಪು ಅವರ ಕುಟುಂಬ ಪ್ರೇಮ, ಅವರು ತಮ್ಮ ಹೆಂಡತಿಯ ಬಗ್ಗೆ ಇಟ್ಟಿದ್ದ ಪ್ರೀತಿ ಇವುಗಳ ಬಗ್ಗೆಯೂ ಇಲ್ಲಿ ತಿಳಿಸಿದ್ದಾರೆ.
ಕುವೆಂಪು ಅವರ ಬದುಕಿನ ಮೈಲುಗಲ್ಲುಗಳು, ಅವರ ವಂಶವೃಕ್ಷ ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳು ಹಾಗೂ ಅವರ ಸಮಗ್ರ ಕೃತಿಸೂಚಿಯನ್ನು ಇಲ್ಲಿ ಪ್ರತ್ಯೇಕವಾಗಿ ನಮೂದಿಸಿದ್ದಾರೆ.
ಕುವೆಂಪು ಅವರಿಗೆ ಕನ್ನಡ ಬಿಟ್ಟು ಬೇರೇನು ಬೇಕಾಗಿರಲಿಲ್ಲ. ಕನ್ನಡನಾಡಲ್ಲಿ ವಾಸಿಸುವವರೆಲ್ಲರೂ ಕನ್ನಡ ಕಲಿಯಬೇಕು ಎಂದು ಹೇಳುತ್ತಿದ್ದರು . ಕನ್ನಡ ನಾಡು ನುಡಿಗಳ ಮೇಲ್ಮೈಗಾಗಿ, ಕರ್ನಾಟಕ ಏಕೀಕರಣಕ್ಕಾಗಿ ಸತತವಾಗಿ ಹೋರಾಟ ಮಾಡಿದ ಧೀರರು ಕುವೆಂಪು. ಪ್ರಾದೇಶಿಕ ಭಾಷೆ ಶಿಕ್ಷಣ ಮಾಧ್ಯಮವಾಗ ಬೇಕು, ಕನ್ನಡ ಆಡಳಿತ ಭಾಷೆಯಾಗಬೇಕೆಂದು ಎಂದು ಹಂಬಲಿಸಿದ ಕವಿ ತಮ್ಮ ಲೇಖನಗಳ ಮೂಲಕ ಅಧಿಕಾರಿಗಳನ್ನು ಎಚ್ಚರಿಸುತ್ತಾ ಬಂದಿದ್ದರು. ಅವರಿಗೆ ಕರ್ನಾಟಕ ಹೇಗೋ ಹಾಗೆ ಭಾರತವು. ಹಾಗಾಗಿ ಕರ್ನಾಟಕ ಮಾತೆಯನ್ನು ಕುವೆಂಪು ಭಾರತ ಜನನಿಯ ತನುಜಾತೆ ಎಂದು ಘೋಷಿಸಿದರು. ಅವರ ಪ್ರತಿಯೊಂದು ವ್ಯವಹಾರದಲ್ಲೂ ಕನ್ನಡ ಪ್ರೇಮ ಎದ್ದು ಕಾಣುತ್ತಿತ್ತು. ಕುವೆಂಪು ಕನ್ನಡಿಗರನ್ನು ಎಲ್ಲಿದ್ದರೂ ಸರಿ ಹೇಗಿದ್ದರೂ ಸರಿ ಕನ್ನಡವಾಗಿರಲಿ ಕೇಳಿಕೊಂಡಿದ್ದರು ಎಂಬುದನ್ನು ನಾವಿಲ್ಲಿ ಓದಬಹುದು.
ವಿಶ್ವಮಾನವ ಸಂದೇಶವನ್ನು ನೀಡಿದ ಕುವೆಂಪು ಅವರು” ಓ ನನ್ನ ಚೇತನ ಆಗು ನೀ ಅನಿಕೇತನ” ಎಂದು ವಿಶ್ವ ವ್ಯಾಪಿಯಾದ ಆತ್ಮತತ್ವದ ವಿರಾಟ್ ರೂಪಕ್ಕೆ ಕರೆಯಿತ್ತರು. ಹಾಗೆಯೇ ಜಗತ್ತಿನ ಪ್ರತಿಯೊಬ್ಬನೂ ವಿಶ್ವಮಾನವನಾಗಬೇಕು ಇದೇ ಅವರ ವಿಶ್ವಾಸ ಪೂರ್ಣ ನಂಬಿಕೆ. ಮತ ಮನುಜ ಮತವಾಗಬೇಕು ಪಥ ವಿಶ್ವಪಥವಾಗಬೇಕು ಇದು ಕುವೆಂಪು ಅವರ ಸೂತ್ರ.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕುವೆಂಪು ಅವರ ಪ್ರತಿಭೆಯನ್ನು ಕಂಡು ಪುಟ್ಟಪ್ಪನವರು ಪುಣ್ಯವಂತರು, ಚಿಕ್ಕಂದಿನಲ್ಲಿಯೇ ಇವರಿಗೆ ಸಿದ್ಧಿಯ ದಾರಿ ಸಿಕ್ಕಿದೆ. ನಮ್ಮ ಪುಣ್ಯವಾಗಿ ಇವರು ಮಾಡುವ ಉಪಾಸನೆ ಎಲ್ಲಾ ಫಲಿಸುತ್ತದೆ ಎಂದು ನುಡಿದಿದ್ದರು.
ಕುವೆಂಪು ಅವರಿಗೆ ರಾಷ್ಟ್ರಕವಿ ಪ್ರಶಸ್ತಿ, ಶ್ರೀ ರಾಮಾಯಣಂ ದರ್ಶನಂ ಕೃತಿಗೆ ಪಂಪ ಪ್ರಶಸ್ತಿ, ಕರ್ನಾಟಕ ಸರ್ಕಾರ ನೀಡುವ ಕರ್ನಾಟಕ ರತ್ನ ಪ್ರಶಸ್ತಿ ದೊರಕಿದೆ. ಕೇಂದ್ರ ಸರ್ಕಾರವು ಕುವೆಂಪು ಅವರಿಗೆ ಪದ್ಮಭೂಷಣ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯು ಮಹಾಕಾವ್ಯ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದ್ದಾರೆ. ಕುವೆಂಪು ಅವರು ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರೂ ಹೌದು. ಎಂಟು ವಿಶ್ವವಿದ್ಯಾಲಯಗಳಿಂದ ಇವರಿಗೆ ಗೌರವ ಡಾಕ್ಟರೇಟ್ ಪದವಿಗಳು ದೊರಕಿರುವುದರ ಬಗ್ಗೆಯೂ ಹಾಗೆಯೇ ಅವರಿಗೆ ದೊರಕಿರುವ ಇನ್ನಿತರ ಪ್ರಶಸ್ತಿಗಳ ಬಗ್ಗೆ ಇಲ್ಲಿ ಮಾಹಿತಿಯಿದೆ.
ಕುವೆಂಪು ಅವರ ಕಾವ್ಯ ಹೇಗೆ ದೊಡ್ಡದೋ ಅವರ ವ್ಯಕ್ತಿತ್ವವೂ ಅಷ್ಟೇ ದೊಡ್ಡದು ಅವರೊಬ್ಬ ಪರಿಪೂರ್ಣ ಮಾನವ ಎಂಬ ನುಡಿಗಳು ಈ ಪುಸ್ತಕವನ್ನು ಓದಿದಾಗ ನಮಗೆ ಅರಿವಾಗುತ್ತದೆ.

ಶ್ರೀವಲ್ಲಿ ಮಂಜುನಾಥ