ಹೊಸ ಪ್ರತಿಭೆ ಕಿಶೋರ್ ಭಾರದ್ವಾಜ್ ರವರ “ಮುಂದಿನ ಅಧ್ಯಾಯ” ಟಿ ಎನ್ ಸೀತಾರಾಮ್ ಗರಡಿಯಲ್ಲಿ
ಟಿ ಎನ್ ಸೀತಾರಾಮ್ ರವರ ಹೊಸ ವೆಬ್ ಸರಣಿ “ಮುಂದಿನ ಅಧ್ಯಾಯ” ವು ಆರಂಭಗೊಂಡು ಈಗ ಏಳನೇ ಎಪಿಸೋಡಿನವರೆಗೂ ಬಂದಿದ್ದು ಭೂಮಿಕಾ ಟಾಕೀಸ್ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಾರವಾಗುತ್ತಿದೆ. ಟಿಎನ್ನೆಸ್ ಅವರ ಈ ವೆಬ್ ಸರಣಿಯು ಈ ದಿನಮಾನದ ಮೊಬೈಲ್ ಯುಗದಲ್ಲೂ ಮನಸ್ಸುಗಳನ್ನೂ ಹಾಗೂ ಸಂಬಂಧಗಳನ್ನೂ ಬೆಸೆಯುತ್ತಿದೆ. ತಮ್ಮದೇ ಆದ ವಿಶಿಷ್ಟ ಸಂಭಾಷಣೆ ಹಾಗೂ ಮನ ಮುಟ್ಟುವ ಕತೆ ಹೇಳುವ ರೀತಿಯ ಅವರ ಶೈಲಿಯು ಇಲ್ಲೂ ತನ್ನ ಛಾಪನ್ನು ಒತ್ತಿದೆ.
ಮತ್ತೆ ಧಾರಾವಾಹಿಯತ್ತ ಟಿ. ಎನ್. ಸೀತಾರಾಮ್

ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಟಿ ಎನ್ ಸೀತಾರಾಮ್ ಅವರ ಹೆಸರು ಚಿರಪರಿಚಿತ. ಕತೆಗಾರ, ಮಾಯಾಮೃಗ, ಮನ್ವಂತರ, ಮುಕ್ತ ಮುಕ್ತ, ಮಹಾಪರ್ವ ಮತ್ತು ಮಗಳು ಜಾನಕಿ ಹೀಗೆ ಹತ್ತಾರು ಜನಪ್ರಿಯ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಸಾಮಾಜಿಕ ಸಮಸ್ಯೆಗಳು, ಮಾನವೀಯ ಸಂಬಂಧಗಳು ಮತ್ತು ಬದುಕಿನ ವಾಸ್ತವಗಳನ್ನೂ ಹಾಗೂ ಕೋರ್ಟ್ ಸೀನ್ಗಳನ್ನೂ ತಮ್ಮ ಕಥೆಗಳ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡುವುದು ಅವರ ಕಥನಶೈಲಿಯ ವಿಶೇಷತೆಗಳಾಗಿವೆ.
ಕೋವಿಡ್ ಸಂದರ್ಭದಲ್ಲಿ “ಮಗಳು ಜಾನಕಿ” ಧಾರಾವಾಹಿ ಸ್ಥಗಿತಗೊಂಡಿತ್ತು. ಸುದೀರ್ಘ ವಿರಾಮದ ಬಳಿಕ ಈಗ ಟಿಎನ್ನೆಸ್ ಈ “ಮಗಳು ಜಾನಕಿ”ಯ ಮುಂದುವರಿದ ಕತೆಯನ್ನು “ಮುಂದಿನ ಅಧ್ಯಾಯ” ಎಂಬ ವೆಬ್ ಸರಣಿಯನ್ನು “ಭೂಮಿಕಾ ಟಾಕೀಸ್” ಯೂಟ್ಯೂಬ್ ಚಾನೆಲ್ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ತಂದಿದ್ದಾರೆ.

ಈ ಸರಣಿಯ ವಿಶೇಷವೆಂದರೆ, ಪ್ರೇಕ್ಷಕರಿಗೆ ಈಗಾಗಲೇ ಪರಿಚಿತವಾಗಿರುವ ಪಾತ್ರಗಳ ಮುಂದಿನ ಬದುಕಿನ ಕಥೆಯನ್ನು ಡಿಜಿಟಲ್ ಮಾಧ್ಯಮದಲ್ಲಿ ಮುಂದುವರಿಸಿರುವುದು. ವಿಶೇಷವಾಗಿ”ಮಗಳು ಜಾನಕಿ”ಯ ಕತೆ ಮತ್ತೆ ಆರಂಭವಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ!
ಶೀರ್ಷಿಕೆ ಸಾಹಿತ್ಯ ಬಸವಣ್ಣನವರ ವಚನ. ಪ್ರವೀಣ್ ಡಿ ರಾವ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ, ಸಿದ್ಧಾರ್ಥ್ ಬೆಳ್ಮಣ್ಣು ಹಾಡಿದ್ದಾರೆ. ಎಂದಿನಂತೆ ಈ ಹಾಡು ಕೂಡ ಮನದಲ್ಲಿ ಗುನುಗುವಂತೆ ಮಾಡಿದೆ. ಶೀರ್ಷಿಕೆ ವಿನ್ಯಾಸವನ್ನು ನಾಡಿನ ಖ್ಯಾತ ಚಿತ್ರಕಲಾವಿದ ಸುಧಾಕರ್ ದರ್ಬೆ ಮಾಡಿದ್ದಾರೆ. ಪ್ರಸಾದನ ಶ್ರೀ ಶೈಲ ಅವರದ್ದಾಗಿದೆ. ಕಲಾ ನಿರ್ದೇಶನವನ್ನು ಹೊಸಮನೆ ಮೂರ್ತಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಂಕಲನವನ್ನು ರಾಧೇಶ್ ರೈ ಮೊಡಪ್ಪಾಡಿ ಮಾಡಿದ್ದಾರೆ. ಸಂಭಾಷಣೆಯನ್ನು ಟಿ ಎನ್ ಸೀತಾರಾಮ್ ಮತ್ತು ಸಮುದ್ಯುತ ಕಂಜರ್ಪಣೆ ಬರೆದಿದ್ದಾರೆ. ಛಾಯಾಗ್ರಹಣ ಚಂದ್ರು ಅವರದ್ದು. ನಿರ್ಮಾಣ ವಿನ್ಯಾಸ ಹಾಗೂ ಸಂಚಿಕೆ ನಿರ್ದೇಶನ ಚಂದನ್ ಶಂಕರ್ ಅವರದ್ದಾಗಿದೆ.
ಈ ವೆಬ್ ಸರಣಿಗಳನ್ನು ಪ್ಲಾನ್ ಮಾಡಿ ತಮ್ಮ ತಮ್ಮ ಬಿಡುವಿನ ವೇಳೆಯಲ್ಲಿ ಮನೆಯವರೆಲ್ಲಾ ಒಟ್ಟಿಗೆ ಕೂತು ನೋಡುವಂತಾಗಿದೆ. ಈ ಧಾರಾವಾಹಿಯು ಸಂಬಂಧಗಳನ್ನು ಮತ್ತೆ ಬೆಸೆಯುವ ಪ್ರಯತ್ನ ಮಾಡುವತ್ತ ವೆಬ್ ಸರಣಿಯ ಮೂಲಕ ಹೊಸ ಹೆಜ್ಜೆ ಇಟ್ಟಿದೆ.
ಮೈಕ್ ಹಿಂದಿದ್ದ ಕಿಶೋರ್ ಭಾರದ್ವಾಜ್ ಈಗ ಕ್ಯಾಮೆರಾ ಮುಂದೆ!

ಎಂಜಿನಿಯರಿಂಗ್ನಲ್ಲಿ ಪಿಎಚ್.ಡಿ., ಬೋಧನೆಯಲ್ಲಿ ಆಸಕ್ತಿ, ಸಂಗೀತದಲ್ಲಿ ಅಭಿರುಚಿ, ಧ್ವನಿ ಕಲೆಯಲ್ಲಿ ಅನುಭವ. ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಕಿಶೋರ್ ಈಗ ನಟ! ಈ “ಮುಂದಿನ ಅಧ್ಯಾಯ” ವೆಬ್ ಸರಣಿಯ ಮೂಲಕ ಕಿಶೋರ್ ಕೆ. ಎಸ್. ಭಾರದ್ವಾಜ್ ಅವರ ಹೊಸ ಪಯಣ ಆರಂಭವಾಗಿದೆ. ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಅಭಿನಯಿಸಿದ್ದಾರೆ. ಇಲ್ಲಿ ನೆಗೆಟೀವ್ ಶೇಡಿನ ಡೈನಮಿಕ್ ನ್ಯೂಸ್ ರಿಪೋರ್ಟರ್ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಕತೆಗೆ ಪೂರಕವಾದ ಹೊಸ ಪಾತ್ರವಿದು. ಮೊದಲ ಬಾರಿಗೇ ಟಿಎನ್ಸೆಸ್ ಅಂತಹವರ ಗರಡಿಯಲ್ಲಿ ಎಂಟ್ರಿ ಸಿಕ್ಕಿದೆ. ಕಿಶೋರ್ ಅವರ ನಟನೆಯನ್ನು ವೀಕ್ಷಕರು ಕಣ್ತುಂಬಿಕೊಂಡಿದ್ದಾರೆ. ಮುಂಬರುವ ಸಂಚಿಕೆಗಳಲ್ಲಿ ಈ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ.
ಅನಿರೀಕ್ಷಿತ ಫೋನ್ ಕಾಲ್ ಬದುಕಿನ ಹಾದಿ ಬದಲಿಸಿತು!
೨೦೧೭ರಲ್ಲಿ ತ್ರಯಿ ಫೌಂಡೇಶನ್ ಆಯೋಜಿಸಿದ್ದ ವಾಯ್ಸ್ ಟ್ರೈನಿಂಗ್ ವರ್ಕ್ ಶಾಪ್ ಕುರಿತು ಮಾಹಿತಿ ಪಡೆಯಲು ಕಿಶೋರ್ ಅವರು ಭೂಮಿಕಾ ಟಾಕೀಸ್ನ ಅಶ್ವಿನಿ ಅವರನ್ನು ಸಂಪರ್ಕಿಸಿದ್ದರು. ಆನಂತರ ೨೦೨೦ರಲ್ಲಿ ಮತ್ತೆ ವಾಯ್ಸ್ ಓವರ್ ಕ್ಷೇತ್ರದಲ್ಲಿನ ಅವಕಾಶಕ್ಕಾಗಿ ಅಶ್ವಿನಿ ಅವರಲ್ಲಿ ಅವಕಾಶ ಕೋರಿದ್ದರು. ಹಲವು ವರ್ಷಗಳ ನಂತರ ಅಶ್ವಿನಿ ಅವರಿಂದ ಹೊಸ ವೆಬ್ ಸೀರೀಸ್ನ ಕ್ಯಾರೆಕ್ಟರ್ ಒಂದಕ್ಕೆ ಲುಕ್ ಟೆಸ್ಟ್ ಗಾಗಿ ಕರೆ ಬಂತು! ಲುಕ್ ಟೆಸ್ಟ್ ಕೊಟ್ಟಾಯ್ತು. ಸುಮಾರು ಏಳೆಂಟು ತಿಂಗಳುಗಳ ನಂತರ ಭೂಮಿಕಾ ಸ್ಟುಡಿಯೋಸ್ನ ಚಂದನ್ ಶಂಕರ್ ಅವರಿಂದ ಪಾತ್ರಕ್ಕೆ ಆಯ್ಕೆಯಾದ ಬಗ್ಗೆ ಕರೆ ಬಂತು. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದರು. ಶೂಟಿಂಗ್ ಮುಗೀತು, ಈಗದು ಪ್ರಸಾರವೂ ಆಗ್ತಿದೆ. ಜನರಿಂದ ಉತ್ತಮ ಪ್ರತಿಕ್ರಿಯೆಯೂ ಸಿಗ್ತಿದೆ!

ಮೊದಲ ಸಲ ನಟನೆ ಮಾಡ್ತಿರೋ ಕಿಶೋರ್ ಅವರು ತಮ್ಮ ಶೂಟಿಂಗ್ ಬಗ್ಗೆ ಮಾತಾಡ್ತಾ ಹೀಗೆಂದರು, ಟಿ ಎನ್ ಸೀತಾರಾಮ್ ಸಾರ್ ಸಲಹೆ ಸೂಚನೆಗಳನ್ನು ಕೊಟ್ಟರು. ಸಂಚಿಕೆ ನಿರ್ದೇಶಕರಾದ ಚಂದನ್ ಅವರು ಪಾತ್ರಕ್ಕೆ ತಕ್ಕಂತೆ ನಟಿಸಲು ಸರಿಯಾದ ಮಾರ್ಗದರ್ಶನ ಕೊಟ್ಟರು. ಅಲ್ಲದೇ ಸಹ ಕಲಾವಿದರು ಹಾಗೂ ತಂಡದ ತಾಂತ್ರಿಕ ವರ್ಗ ತುಂಬಾ ಸಪೋರ್ಟ್ ಮಾಡಿದರು. ನಟನೆಯ ಸೂಕ್ಷ್ಮ ಅಂಶಗಳು, ಯಾವ ರೀತಿ ನಟನೆ ಮಾಡಬೇಕು, ಯಾವ ರೀತಿ ಮಾಡಬಾರದು ಅನ್ನೋದನ್ನ ಸೀತಾರಾಮ್ ಸರ್ ಶೂಟಿಂಗ್ ಸೆಟ್ನಲ್ಲಿ ತಾವೇ ಆ್ಯಕ್ಟ್ ಮಾಡಿ ತೋರಿಸಿ ಹೇಳಿ ಕೊಡ್ತಾ ಇದ್ದರು. ಚಂದನ್ ಶಂಕರ್ ಅವರು ಧ್ವನಿಯ ಏರಿಳಿತಗಳನ್ನು ತುಂಬಾ ಚೆನ್ನಾಗಿ ಹೇಳಿಕೊಟ್ಟರು. ಇದು ನನಗೆ ಬಹಳ ಒಳ್ಳೆಯ ಅನುಭವ ಮತ್ತು ಕಲಿಕೆಗೆ ಅನುಕೂಲವಾಯ್ತು. ನಾನೂ ಸೆಟ್ನಲ್ಲಿ ಎಲ್ಲರ ಮುಂದೆ ಧೈರ್ಯವಾಗಿ ಪಾತ್ರಕ್ಕೆ ತಕ್ಕಂತೆ ಹಾಗೂ ನಿರ್ದೇಶಕರಿಗೆ ಬೇಕಾದ ಹಾಗೇ ನಟಿಸಬಲ್ಲೆ ಎಂಬ ಆತ್ಮವಿಶ್ವಾಸವನ್ನು ತುಂಬಿದ್ದಾರೆ.
ನಿರೂಪಣೆ ಹಾಗೂ ಡಬ್ಬಿಂಗ್

“ಧ್ವನಿಧಾರೆ ಮೀಡಿಯಾ” ಮುಖಾಂತರ ವಾಯ್ಸ್ ಓವರ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ, ನಂತರ ಮೈಲ್ಯಾಂಗ್ ಬುಕ್ಸ್ ಮತ್ತು ಕೂಕು ಎಫ್ಎಂ ನಂತಹ ವೇದಿಕೆಗಳಲ್ಲಿ ಹಲವು ಕನ್ನಡ ಕಥೆಗಳನ್ನು ನಿರೂಪಣೆ ಮಾಡಿದ್ದಾರೆ. ಹಿಂದಿಯ ಯೂಟ್ಯೂಬ್ ವಿಡಿಯೊಗಳಿಗೆ ತೆಲುಗಿನಲ್ಲಿ ಡಬ್ಬಿಂಗ್ ಮಾಡಿದ್ದಾರೆ. ೨೦೨೪ರಿಂದ ಕನ್ನಡ ಧಾರಾವಾಹಿ “ಶಾಂತಿನಿವಾಸ” ದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಧ್ವನಿ ನೀಡುತ್ತಿದ್ದಾರೆ. ರವಿ ಬೆಳಗೆರೆ ಅವರ “ನೀ ಹೀಂಗ ನೋಡಬ್ಯಾಡ ನನ್ನ” ಕಾದಂಬರಿಯ ಆಡಿಯೋ ಬುಕ್ನಲ್ಲಿ ಶಿಶಿರಚಂದ್ರ ಎಂಬ ಪ್ರಮುಖ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಬಚೂರಿನ ಪೋಸ್ಟ್ ಆಫೀಸು ಕೃತಿಗೂ ಧ್ವನಿ ನೀಡಿದ್ದಾರೆ. ಹೀಗೆ ತೆರೆಮರೆಯಲ್ಲೇ ಇದ್ದ ಕಿಶೋರ್ ಅವರು ಈಗ ಕ್ಯಾಮೆರಾ ಮುಂದೆ ಬಂದಿದ್ದಾರೆ. ಡೈಲಾಗ್ ಏರಿಳಿತಗಳಷ್ಟೇ ಅಲ್ಲದೇ ಪಾತ್ರಕ್ಕೆ ತಕ್ಕ ಬಾಡಿ ಲಾಂಗ್ವೇಜ್ ಹಾಗೂ ಎಕ್ಸ್ಪೆಷನ್ಗಳನ್ನು ಕೂಡ ತಾ ಕೊಡಬಲ್ಲೆ ಎಂದು ಸಾಬೀತು ಮಾಡಿದ್ದಾರೆ.
ಸಂಗೀತದಲ್ಲೂ ತರಬೇತಿ ಹಾಗೂ ಆಸಕ್ತಿ

ಕಿಶೋರ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದು ತಮಿಳುನಾಡಿನ ತಿರುಚಿರಾಪಳ್ಳಿಯ ಸರಸ್ವತಿ ಸಂಗೀತ ವಿದ್ಯಾಲಯದ ಮೂಲಕ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಗ್ರೇಡ್ ೪ ಪೂರ್ಣಗೊಳಿಸಿದ್ದಾರೆ. ೨೦೧೯ರಲ್ಲಿ ದೂರದರ್ಶನ ಚಂದನದ ಗಾನಚಂದನ ಸಂಗೀತ ರಿಯಾಲಿಟಿ ಶೋನ ಮೆಗಾ ಆಡಿಷನ್ ಗೆ ಚಿಕ್ಕಬಳ್ಳಾಪುರದಿಂದ ಆಯ್ಕೆಯಾಗಿದ್ದರು. ಇವರ ಗಾಯನವು ದೂರದರ್ಶನದಲ್ಲೂ ಪ್ರಸಾರವಾಗಿತ್ತು. ಕ್ಲಬ್ ಹೌಸಿನ ಟಿಟಿಸಿ ಐಡಲ್ ತೆಲುಗು ಸ್ಪರ್ಧೆಯಲ್ಲಿ ಫೈನಲ್ ರೌಂಡ್ವರೆಗೂ ಹೋಗಿದ್ದರು. ವಾಯ್ಸ್ ಆಫ್ ಕ್ಲಬ್ ಹೌಸ್ (ವಿಓಸಿ) ತೆಲುಗು ಸ್ಫರ್ಧೆಯಲ್ಲಿ ಟಾಪ್ ೨೫ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.
ಹೀಗೆ ಬಹುಮುಖ ಪ್ರತಿಭೆಯ ಕಿಶೋರ್ ಭಾರದ್ವಾಜ್ ಅವರು ಟಿಎನ್ನೆಸ್ ಅವರ ನಿರ್ದೇಶನದ ವೆಬ್ ಸರಣಿಯ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿರು ತೆರೆಯಿಂದ ಮುಂದೆ ಹಿರಿ ತೆರೆಗೂ ಅವಕಾಶಗಳು ಸಿಗಲೆಂದು ಆಶಿಸೋಣ.

ಸಂಕೇತ್ ಗುರುದತ್