ಗುಮ್ನಾಮಿ ಬಾಬಾ – ಸುಭಾಷ್!
ಉತ್ತರ ಪ್ರದೇಶದ ಅಯೋಧ್ಯೆಯ ಸಮೀಪದ ಪಟ್ಟಣವಾದ ಫೈಜಾಬಾದಿನಲ್ಲಿ 1985ರವರೆಗೆ ವಾಸವಾಗಿದ್ದು, ಆ ರಾಜ್ಯದಾದ್ಯಂತ ಸುತ್ತಾಡುತ್ತಿದ್ದ ಸನ್ಯಾಸಿಯೊಬ್ಬರನ್ನು ಅಲ್ಲಿನ ಜನರು ಭಗವಾನ್, ಬಾಬಾಜಿ, ಗುಮ್ನಾಮಿ ಬಾಬಾ ಎಂದೆಲ್ಲಾ ಕರೆಯುತ್ತಿದ್ದರು. ಫೈಜಾಬಾದ್ ಪಟ್ಟಣದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಇವರು ತನ್ನನ್ನು ಭೇಟಿ ಮಾಡುವ ಭಕ್ತಾದಿಗಳನ್ನು ಮುಖಕ್ಕೆ ಮುಖ ಕೊಟ್ಟು ಮಾತನಾಡಿಸುವ ಬದಲು ಬಟ್ಟೆಯ ಪರದೆಯ ಒಳಗಡೆಯೇ ಇದ್ದು, ಮಾತಾನಾಡಿಸುತ್ತಿದ್ದರು, ಆದರೆ ಯಾರಿಗೂ ತನ್ನ ಮುಖವನ್ನು ತೋರಿಸುತ್ತಾ ಇರಲಿಲ್ಲ ಎನ್ನುತ್ತಾರೆ ಅಲ್ಲಿನ ಜನರು. ಈ ಕಾರಣಕ್ಕೆ ಇವರನ್ನು ಭಕ್ತರೆಲ್ಲಾ ಗುಮ್ನಾಮಿ ಬಾಬಾ ಎಂದೇ ಕರೆಯುತ್ತಿದ್ದರು.

ಈ ಬಾಬಾಗೆ ಅಂಚೆಯ ಮೂಲಕ ದಿನವೂ ಇಂಗ್ಲೀಷ್ ಮತ್ತು ಬೆಂಗಾಲಿ ಭಾಷೆಯ ವಿವಿಧ ದಿನಪತ್ರಿಕೆಗಳು, ವಾರಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಹಾಗೂ ಪುಸ್ತಕಗಳು ಬರುತ್ತಿದ್ದವು ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದರು. ಪ್ರತಿ ದಿನವೂ ಮುಸ್ಸಂಜೆಯ ವೇಳೆಗೆ ಶಂಖನಾದ ಕೇಳಿತೆಂದರೆ ಬಾಬಾ ಪೂಜೆ ಮಾಡುತ್ತಿದ್ದಾರೆ ಎಂದೂ ಶಂಖನಾದ ಕೇಳದಿದ್ದರೆ ಬಾಬಾ ಪರ್ಯಟನೆಗೆ ಹೋಗಿದ್ದಾರೆ ಎಂದು ಸ್ಥಳೀಯರು ಅರ್ಥೈಸಿಕೊಳ್ಳುತ್ತಿದ್ದರು. ಆದರೆ ಬಾಬಾ ಹೊರಗಡೆ ಹೋಗುವುದನ್ನಾಗಲೀ, ಹೊರಗಡೆಯಿಂದ ಬರುವುದನ್ನಾಗಲೀ ಯಾರೂ ನೋಡಲು ಸಾಧ್ಯವಾಗದಷ್ಟು ರಹಸ್ಯವಾಗಿ ಅವರ ಚಲನವಲನ ಇರುತ್ತಿತ್ತು ಹಾಗೂ ಸಾರ್ವಜನಿಕವಾಗಿ ಇವರು ಎಲ್ಲೂ ಕಾಣಿಸಿಕೊಳ್ಳುತ್ತಾ ಇರಲಿಲ್ಲ ಎಂದೂ ಅವರ ಭಕ್ತರು ಹೇಳುತ್ತಿದ್ದರು.
19 ಸೆಪ್ಟೆಂಬರ್ 1985 ರ ಸಪ್ಟೆಂಬರ್ 19 ರಂದು ಮಧ್ಯರಾತ್ರಿಯ ವೇಳೆಗೆ ಈ ಬಾಬಾರವರ ಮೃತದೇಹವನ್ನು ಸಾರ್ವಜನಿಕರಿಗೆ ತಿಳಿಯದಂತೆ ರಾಷ್ಟ್ರ ಧ್ವಜದಲ್ಲಿ ಸುತ್ತಿ ಅವರಿದ್ದ ಬಾಡಿಗೆ ಮನೆಯಿಂದ ತಂದು ಸರಯೂ ನದಿಯ ತೀರದ ಗುಪ್ತರ್ ಘಾಟ್ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನ ನಡೆದಾಗ ಇವರ ಅತ್ಯಾಪ್ತರು ಹದಿನಾಲ್ಕು ಮಂದಿ ಮಾತ್ರವೇ ಇದ್ದರು. ಇವರ ಆಪ್ತರಲ್ಲೊಬ್ಬರಾದ ರಾಮ್ ಕಿಶೋರ್ ಪಾಂಡಾ ಈ ಬಾಬಾರ ಅಂತಿಮ ಯಾತ್ರೆಗೆ ಸರಿಸುಮಾರು ಹದಿಮೂರು ಲಕ್ಷ ಜನರು ಭಾಗಿಯಾಗಬೇಕಿತ್ತು, ಆದರೆ ಇಂದು ನಾವು ಕೇವಲ ಹದಿಮೂರು ಮಂದಿಯಷ್ಟೇ ಇರುವುದು ದುರಂತವಲ್ಲದೇ ಇನ್ನೇನು ಎಂದು ಅವರು ಭಾವುಕರಾಗಿ ಅತ್ತಿದ್ದರು.

ಇವರು ವಾಸವಾಗಿದ್ದ ಪೈಜಾಬಾದಿನ ಬಾಡಿಗೆ ಮನೆಯ ಬರೋಬ್ಬರಿ ಇಪ್ಪತ್ತನಾಲ್ಕು ಮರದ ಪೆಟ್ಟಿಗೆಗಳಲ್ಲಿ ದೊರೆತಿದ್ದ ಬಾಬಾರವರ ಪುಸ್ತಕಗಳು, ಜರ್ಮನ್ ದೇಶದ ಟೈಪ್ರೈಟಿಂಗ್ ಯಂತ್ರ, ಹಲವು ಪತ್ರಗಳು, ದೂರದರ್ಶಕ ಉಪಕರಣ, ವೃತ್ತಾಕಾರದ ಚೌಕಟ್ಟಿನ ಕನ್ನಡಕ, ಅದೇ ರೀತಿ 2500 ವಿವಿಧ ಬಗೆಯ ವಸ್ತುಗಳು ಅವುಗಳ ನಿಜವಾದ ಮಾಲೀಕರು ಯಾರಾಗಿದ್ದರು ಎನ್ನುವುದನ್ನು ಮೌನವಾಗಿ ಹೇಳುತ್ತಿದ್ದವು. ಈ ಎಲ್ಲಾ ವಸ್ತುಗಳನ್ನು ಅಚ್ಚುಕಟ್ಟಾಗಿ ವಸ್ತು ಸಂಗ್ರಹಾಲಯದಲ್ಲಿ ಇಟ್ಟು ಅವುಗಳನ್ನು ಸಾರ್ವಜನಿಕರ ವೀಕ್ಷಣೆಗೆ ಒದಗಿಸಬೇಕೆಂದು ಅಲಹಾಬಾದ್ ಉಚ್ಚನ್ಯಾಯಾಲಯ ಆದೇಶವನ್ನು ನೀಡಿದೆ. ಹಾಗಿದ್ದರೆ ಯಾರಾಗಿದ್ದರು ಈ ಗುಮ್ನಾಮಿ ಬಾಬಾ????

ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ದೇಶದ ಪ್ರಧಾನಿಯ ಪಟ್ಟವನ್ನು ಏರಬೇಕಿದ್ದ ನೇತಾಜಿ ಇಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿದ್ದ ಒಳಜಗಳಗಳು, ಕಿತ್ತಾಟ ಮತ್ತು ಕುತಂತ್ರಗಳನ್ನು ನೋಡಿ ಬೇಸತ್ತು ಇಲ್ಲಿನ ಅಧಿಕಾರಾಕಾಂಕ್ಷಿಗಳ ನಡುವಿನ ಬದುಕೇ ಬೇಡವೆಂದು ನಿರ್ಧರಿಸಿದ್ದರೇ? ನಂತರ ಭಾರತಕ್ಕೆ ಬಂದು ಸ್ವಾಮೀಜಿಯ ವೇಷವನ್ನು ತೊಟ್ಟು ಈ ದೇಶದಲ್ಲೇ, ಇಲ್ಲಿನ ಜನರ ನಡುವೆಯೇ ಸ್ವಾತಂತ್ರ್ಯ ಸಿಕ್ಕ ನಂತರವೂ ತನ್ನ ಕೊನೆಯ ಉಸಿರು ಇರುವವರೆಗೂ ಬದುಕಿದ್ದರೇ? ಬದುಕಿದ್ದ ಭೋಸರನ್ನು ಭಾರತೀಯರು ಗುರುತಿಸಲು ಸಾಧ್ಯ ಆಗಲಿಲ್ಲವೇ? ತನ್ನ ಪರಿಚಯವನ್ನು ಮತ್ತು ತಾನು ದೇಶದ ಒಳಗೇ ಗುಪ್ತವಾಗಿ ಜೀವನ ಸಾಗಿಸುತ್ತಾ ಇರುವುದನ್ನು ಯಾರೊಬ್ಬರ ಜೊತೆಗೂ ಹಂಚಿಕೊಳ್ಳಬಾರದು ಎಂದು ತನ್ನ ಹದಿಮೂರು ಮಂದಿ ಅತ್ಯಾಪ್ತ ಮಿತ್ರರಿಗೆ ಕಟ್ಟಪ್ಪಣೆಯನ್ನು ನೇತಾಜಿ ಮಾಡಿದ್ದರೇ? ಗುಮ್ನಾಮಿ ಬಾಬಾರ ಮನೆಯಲ್ಲಿ ಸಿಕ್ಕ ವಸ್ತುಗಳು ಏನನ್ನು ಸಾರುತ್ತವೆ, ರಾಷ್ಟ್ರಧ್ವಜದಲ್ಲಿ ಬಾಬಾರ ದೇಹವನ್ನು ಸುತ್ತಿದ್ದಾದರೂ ಏಕೆ?
ಈ ಎಲ್ಲಾ ಪ್ರಶ್ನೆಗಳಿಗೂ ಕಾಲವೂ ಇನ್ನೂ ಉತ್ತರ ನೀಡಿಲ್ಲ! ಮುಂದೆ ನೀಡುವುದೋ ತಿಳಿದಿಲ್ಲ? ಆದರೆ ಕಾದು ನೋಡುವುದಷ್ಟೇ ನಮಗೆ ಉಳಿದಿರುವ ದಾರಿ. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವುದೇ ತನ್ನ ಬದುಕಿನ ಪರಮ ಧ್ಯೇಯವೆಂದು ಭಾವಿಸಿದ್ದ ನೇತಾಜಿಯನ್ನು ವಿಮಾನ ಅಪಘಾತದಲ್ಲಿ ಕಳೆದುಕೊಂಡಿದ್ದೇವೆ ಎಂದು ನಂಬಬೇಕಾದದ್ದೂ ಒಂದು ದುರಂತವೇ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು,
ದ.ಕ ಜಿಲ್ಲೆ-574198
ದೂ: 9742884160