ಭರವಸೆ

ಭರವಸೆ

ನಾನಡೆವ ಹಾದಿಯ
ಬದಿಯ ಮರದಲಿ ಕುಳಿತ
ಕೋಗಿಲೆಯು ತಾನಿಂದು,
ನಾನೆಂದೊ ಮರೆತ
ಹಾಡೊಂದನು ತನ್ನಿನಿ
ದನಿಯಲಿ ಹಾಡುತಿಹುದು;

ನೂರಾರು ಮಳೆಬಿಲ್ಲ
ಬಣ್ಣವನು ಕಡಪಡೆದು
ತನ್ನ ತಾ ಸಿಂಗರಿಸಿ,
ಬದಿಯ ಹೊಳೆಯಲಿ
ಬಗ್ಗಿ ತನ್ನಂದಕೆ ಹಿಗ್ಗಿ,
ತುಸು ನಾಚಿದ ಧರಣಿಯ
ತೆರದಿ ಇಂದೆನ್ನ ಮನವೇಕೆ
ನಲಿಯುತಿಹುದು;

ಹೊಳೆಯಂತೆ ಹರಿದ
ಗುಲಾಬಿಯ ಪನ್ನೀರಲಿ
ತೊಯ್ದ ದುಂಬಿಯ
ಗುಂಜಾರವದಂತೆ
ನನ್ನ ಮನವೇಕೋ
ಅರಿಯದಾ ಮತ್ತಿನಲಿ
ಮುಳುಗುತಿಹುದು;

ನಿನ್ನ ಕಂಗಳಲಿರುವ
ತಂಪಾದ ಚಂದ್ರಿಕೆಯು
ಮೌನದಲೆ, ಪ್ರೀತಿಯಲೆ
ನನ್ನ ಕಂಗಳಲಿಳಿದು
ಮನವನಾವರಿಸುತಲಿ
ಸಂತೈಸಿ, ಭದ್ರತೆಯ
ಭಾವವ ನೀಡುತಿಹುದು !

ಶ್ರೀವಲ್ಲಿ ಮಂಜುನಾಥ

Related post