ಮನದ ಕನಸುಗಳು
ತಂಪು ಸೂರ್ಯನ
ಕೆಂಪು ಕಿರಣದಲಿ
ತೇಯ್ದ ಸಂಜೆಯಂತೆ ;
ಏರೇರಿ ಅಬ್ಬರಿಸಿ
ಬಂದು ಹಿಂತಿರುಗುವ
ಅಲೆಯುಬ್ಬರದಂತೆ;
ಭಾವನೆಗಳಿಗಂಜಿ
ಒಳಗೊಳಗೇ ಹುದುಗಿ
ಕುದಿವ ಲಾವದಂತೆ;
ಕಣ್ರೆಪ್ಪೆಯಲ್ಲಡಗಿ
ಕಣ್ತೆರೆದೊಡನೆ ಕಾಡುವ
ಕಾಮನಬಿಲ್ಲಿನಂತೆ;
ಆಳ ಕಣಿವೆಯಲಿ
ಹೊದ್ದು ಮಲಗಿರುವ
ಮೌನದಾ ಧ್ಯಾನದಂತೆ;
ಗುಡಿಯ ದೇವನೆದುರು
ತಣ್ಣನೆ ಉರಿಯುತಿಹ
ನಂದಾ ದೀಪದಂತೆ ;
ಕಾರಿರುಳಿನಲಿ ಕಣ್ಬಿಟ್ಟು,
ತಟ್ಟನೆ ನಗುವ ಮುದ್ದು
ಹಸುಗೂಸಿನಂತೆ ;
ನೆಲದಾಳದಲ್ಲವಿತು,
ಮಳೆಹನಿಗೆ ಮೊಳೆತು
ಚಿಗುರುವ ಬೀಜದಂತೆ!!
ಶ್ರೀವಲ್ಲಿ ಮಂಜುನಾಥ