ವ್ಯಾಯಾಮವೇ ಭಾಗ್ಯ
ವ್ಯಾಯಾಮವು ನಮ್ಮ ಜೀವನದ ಒಂದು ಅತ್ಯಂತ ಪ್ರಮುಖವಾದ ಅಂಗ. ಪ್ರತಿಯೊಬ್ಬ ಜೀವಿಗೂ ಅತ್ಯಂತ ಅವಶ್ಯಕವಾದ ಈ ವ್ಯಾಯಾಮವು ಮಾನಸಿಕ ಹಾಗೂ ಶರೀರಿಕ ಆರೋಗ್ಯವನ್ನು ಕಾಪಾಡುವುದರಲ್ಲಿ ಮೊದಲನೆಯ ಸ್ಥಾನದಲ್ಲಿದೆ. ನಮ್ಮ ದೇಹದ ಅಂಗಾಂಗಗಳನ್ನು ಸುಸ್ಥಿರವಾಗಿ ಇಡಲು, ಧೀರ್ಘವಾದ ಆಯಸ್ಸನ್ನು ಹೊಂದಿರಲು ನಿಯಮಿತ ವ್ಯಾಯಾಮ ಸಹಾಯ ಮಾಡುತ್ತದೆ.

ಇಲ್ಲಿ ನಿಯಮಿತ ಎನ್ನುವುದು ಅತ್ಯಂತ ಮುಖ್ಯವಾದ ಪದವಾಗಿದೆ, ನಮ್ಮ ದೇಹದ ಸ್ನಾಯುಗಳಿಗೆ ಜ್ಞಾಪಕ ಇಟ್ಟುಕೊಳ್ಳುವಂಥ ಶಕ್ತಿ ಇದೆ ದಿನವೂ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ನೆನಪಿನಲ್ಲಿಟ್ಟುಕೊಂಡು ವೃದ್ಧಿಸುತ್ತವೆ, ಸ್ನಾಯುಗಳು ಬಲಗೊಂಡಂತೆ ನಮ್ಮ ದೇಹದಲ್ಲಿ ಶಕ್ತಿಸಂಚಯ ವಾಗುತ್ತದೆ ಓಡಾಟ ಸುಲಭವೆನಿಸುತ್ತದೆ ಮನಸ್ಸು ಹಗುರವಾಗುತ್ತದೆ.
ವ್ಯಾಯಾಮದ ಉಪಯೋಗಗಳು
ವ್ಯಾಯಾಮ ಮಾಡುವುದರಿಂದ ಹೃದಯ ಹಾಗೂ ಹೃದಯ ನಾಳ ಆರೋಗ್ಯವಾಗಿರುತ್ತದೆ ಮಧುಮೇಹ ಹಾಗೂ ಬೊಜ್ಜು ರೋಗಗಳನ್ನು ತಡೆಗಟ್ಟಲು ವ್ಯಾಯಾಮದಿಂದ ತುಂಬಾ ಅನುಕೂಲ. ಉಲ್ಲಾಸಭರಿತವಾದ ಮನಸ್ಸು ಆರೋಗ್ಯಕರವಾದ ದೇಹಕ್ಕೆ ತುಂಬಾ ಅನುಕೂಲ, ನಿಯಮಿತವಾದ ವ್ಯಾಯಾಮದಿಂದ ದೇಹದಲ್ಲಿ ಹಾರ್ಮೋನುಗಳ ಕೊರತೆ ಅಥವಾ ಹೆಚ್ಚುವಿಕೆಯನ್ನು ತಡೆಗಟ್ಟಿ, ಅವುಗಳಿಂದ ಬರುವ ಕಾಯಿಲೆಗಳಿಂದ ತಪ್ಪಿಸಿಕೊಳ್ಳಬಹುದು ವ್ಯಾಯಾಮದಿಂದ ಯಕೃತ್ ನಲ್ಲಿ ತುಂಬಿಕೊಳ್ಳಬಹುದಾದ ಲಿಪಿಡ್ ಅಂಶವನ್ನು ತಡೆಗಟ್ಟಬಹುದು ಇದರಿಂದ ಹೃದಯದ ಆರೋಗ್ಯ ವೃದ್ಧಿಸುತ್ತದೆ.ಶ್ವಾಸಕೋಶ ವನ್ನು ಬಲಪಡಿಸುವುದರಲ್ಲಿ ವ್ಯಾಯಾಮದ ಪಾತ್ರ ಹಿರಿದು.

ಆತಂಕ ಖಿನ್ನತೆ ಇವುಗಳಿಂದ ಪಾರಾಗಲು ನಿಯಮಿತ ವ್ಯಾಯಾಮ ಸಹಾಯ ಮಾಡುತ್ತದೆ ಮೆದುಳಿನಲ್ಲಿ ಎಂಡಾರ್ಫಿನ್, ಡೋಪಮಿನ್ ಮೊದಲಾದ ರಾಸಾಯನಿಕ ಉತ್ಪತ್ತಿಗಳಿಂದ ಮನಸ್ಸು ಹಗುರಾಗಿ ಖುಷಿಯಾಗಿರುತ್ತದೆ ರೋಗನಿರೋಧಕ ಶಕ್ತಿಯನ್ನು ವ್ಯಾಯಾಮ ಹೆಚ್ಚಿಸುತ್ತದೆ.
ನಿದ್ರಾಹೀನತೆ ಇರುವವರಿಗೆ ವ್ಯಾಯಾಮ ಒಳ್ಳೆಯ ನಿದ್ರೆಯನ್ನು ತರುತ್ತದೆ. ವಯಸ್ಸಿಗೆ ಸಂಬಂಧಿಸಿದ ದೈಹಿಕ ಕ್ಷೀಣತೆಯನ್ನು ವ್ಯಾಯಾಮ ತಡೆಗಟ್ಟುತ್ತದೆ. ಆರೋಗ್ಯದ ಜೊತೆಗೆ, ಸೌಂದರ್ಯ ವೃದ್ಧಿಯಾಗುತ್ತದೆ, ದೇಹದ ಸಮತೋಲನವನ್ನು ಕಾಪಾಡುತ್ತದೆ ಆರೋಗ್ಯ ವೃದ್ಧಿಯಾದಾಗ ಅನಾವಶ್ಯಕವಾಗಿ ಔಷಧಿ ಹಾಗೂ ಆಸ್ಪತ್ರೆಗಳಿಗೆ ದುಡ್ಡು ಸುರಿಯೋದು ಕಮ್ಮಿಯಾಗಿ ಉಳಿತಾಯ ಮಾಡಬಹುದು.
ವ್ಯಾಯಾಮದ ವಿಧಾನಗಳು

ನಡಿಗೆ ಅತ್ಯಂತ ಸರಳವಾದ, ಸುಲಭವಾದ ಎಲ್ಲಿ ಬೇಕಾದರೂ ಮಾಡಬಹುದಾದಂತ ವ್ಯಾಯಾಮ ನಡೆಯುವುದರಿಂದ ಕಾಲಿನ ಸೊಂಟದ ಸ್ನಾಯುಗಳು ಬಲಗೊಂಡು ರಕ್ತ ಚಲನೆ ವೃದ್ಧಿಸುತ್ತದೆ
ಮೂಳೆಗಳ ಸಾಂದ್ರತೆ ಹೆಚ್ಚುತ್ತದೆ, ಹಾಗೆಯೇ ಓಡುವುದು ಒಳ್ಳೆಯ ವ್ಯಾಯಾಮ. ಈಜುಗಾರಿಕೆ ಶಕ್ತಿಹೀನರು ಹಾಗೂ ವೃದ್ಧರು ಮಾಡಬಹುದಾದ ತುಂಬಾ ಸರಳವಾದ ವ್ಯಾಯಾಮವಾಗಿದೆ. ಜಿಮ್ ನಲ್ಲಿ ವ್ಯಾಯಾಮ, ಯಾವುದೇ ತರದ ಗುಂಪಿನಲ್ಲಿ ಆಡುವ ಆಟಗಳು, ನೃತ್ಯ, ಯೋಗ, ಸೈಕ್ಲಿಂಗ್, ಜಾಗಿಂಗ್, ತೋಟಗಾರಿಕೆ ಇವೆಲ್ಲವೂ ಒಳ್ಳೆಯ ವ್ಯಾಯಾಮ
ನಿಯಮಿತವಾದ ವ್ಯಾಯಾಮವೇ ತೂಕ ಇಳಿಸಿ ಕೊಳ್ಳುವ ಸರಿಯಾದ ಕ್ರಿಯೆ ಅದಕ್ಕಾಗಿ ಯಾವುದೇ ತರಹದ ಅಡ್ಡ ದಾರಿಯನ್ನು ಹಿಡಿಯದಿರುವುದು ಉತ್ತಮ.

ಡಾ ರುಕ್ಮಿಣಿ ವ್ಯಾಸರಾಜ