ಕನಸಿನ ಕನ್ನಡಿ

ಕನಸಿನ ಕನ್ನಡಿ

ಹೀಗೆ ಕನಸು ಬೀಳುವುದಕ್ಕೂ ಪುಣ್ಯ ಮಾಡಿರಬೇಕು,
ವರ್ಷವಿಡೀ ಗದರುವ ಮಾಲೀಕ
ಹರುಷದಿ ನಗುತ ಸಂಬಳದ ಜೊತೆಗೆ
ಬೋನಸ್ ಒಂದನ್ನು ಅಡ್ವಾನ್ಸ್ ನೀಡಿದಂತೆ!

​ತಿಂಗಳ ಸಂಬಳವು ಮನೆಯ ದಿನಸಿಗೆ ಸಾಲಿ,
ಖರ್ಚು-ವೆಚ್ಚಗಳನ್ನೆಲ್ಲ ತೂಗಿಸಿ ಹಿಡಿದು
ಕೈಯಲ್ಲಿ ಒಂದಷ್ಟು ಹಣವೂ ಉಳಿದಂತೆ!

​ಹೀಗೆ ಕನಸುಗಳು ಬೀಳಲು ಪುಣ್ಯ ಮಾಡಿರಬೇಕು,
ಬೈಕು-ಕಾರುಗಳನ್ನು ಖರೀದಿಸುವಾಗ
ಇ.ಎಮ್.ಐ ಬದಲಿಗೆ ಇಡೀ ಗಂಟನ್ನೇ ಕೊಟ್ಟಂತೆ!
​ಚಿಕ್ಕದೊಂದು ಸೈಟಿನ ಕನಸು ಕಂಡ ಮಧ್ಯವಯಸ್ಕನೊಬ್ಬ
ಮಹಡಿಯ ಮನೆಯನ್ನೇ ಖರೀದಿಸಿ ಸಂಭ್ರಮಿಸಿದಂತೆ!

​ಹೀಗೆ ಕನಸುಗಳು ಬೀಳಲು ಪುಣ್ಯ ಮಾಡಿರಬೇಕು,
ಶಾಶ್ವತ ಕಾಯಿಲೆಯೊಂದು ಹೇಳ ಹೆಸರಿಲ್ಲದೆ ಕರಗಿ ಹೋದಂತೆ
ದೇಹದ ಊನವೊಂದು ಯಾರಿಗೂ ಕಾಣದಂತೆ ಮಾಯವಾದಂತೆ!

​ಹೀಗೆ ಕನಸು ಬೀಳಲು ಪುಣ್ಯ ಮಾಡಿರಬೇಕು,
ಅಗಲಿದ ಪ್ರೇಯಸಿ ಬಂದು ಮನವ ಸಂತೈಸಿದಂತೆ
ದೂರ ತಳ್ಳಿ ಹೋದವರು ಮರಳಿ ಬಂದು ಮಾತನಾಡಿಸಿದಂತೆ!

​ಹೀಗೆ ಕನಸು ಬೀಳಲು ಪುಣ್ಯ ಮಾಡಿರಬೇಕು,
ಯಾರಿಗಾಗಿ ಕನಸು ಕಂಡೆವೋ, ಜೀವದ ದಣಿವ ಅರಿಯದೆ
ಹಗಲಿರುಳೆನ್ನದೆ ಕಷ್ಟಪಟ್ಟು ದುಡಿದೆವೋ…
ಆ ಮಕ್ಕಳು ಉನ್ನತ ಹುದ್ದೆಗೇರಿ ನಮ್ಮನ್ನು ಜತನದಿಂದ ಕಾಯ್ದಂತೆ!

​ಹೀಗೆ ಕನಸು ಬೀಳಲು ಪುಣ್ಯ ಮಾಡಿರಬೇಕು,
ಆರ್ಥಿಕ ಅಬಲನೊಬ್ಬ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವಷ್ಟು
ಹಣದ ಹೊಳೆಯೇ ಹರಿದು ಬಂದಂತೆ!

​ಹೀಗೆ ಕನಸು ಬೀಳಲು ಪುಣ್ಯ ಮಾಡಿರಬೇಕು,
ಶತ್ರುಗಳ ಜೊತೆಗೆ ಸಾವೇ ಎದುರಾಗಿ ಬಂದರೂ
ನಾವು ಕದಲದೇ ಅವರ ಎದುರು ನಗುತ ನಿಂತಂತೆ!

​ಹೀಗೆ ಕನಸುಗಳು ಬೀಳಲು ಪುಣ್ಯ ಮಾಡಿರಬೇಕು,
ದಣಿದ ಕೂಲಿ ಕಾರ್ಮಿಕನೊಬ್ಬ ಹೊಟ್ಟೆತುಂಬ ಉಂಡು
ನಿಶ್ಚಿಂತೆಯಿಂದ ಕಣ್ಣುಮುಚ್ಚಿ ಮಲಗಿದಂತೆ!

ಹೀಗೆ ಕನಸು ಬೀಳುವದಕ್ಕೂ ಪುಣ್ಯ ಮಾಡಿರಬೇಕು
ನನಸಾಗದ ಕನಸಿಗೆ ಕೊರಗುವ ಹೃದಯಗಳ ಎದುರು ಆ ದೇವರು ಪ್ರತ್ಯಕ್ಷವಾಗಿ ಅವರು ಬೇಡಿದ ಎಲ್ಲದಕ್ಕೂ ಅಸ್ತು ಅಂದಂತೆ!

ದೀಪಕ್ ಶಿಂಧೇ
9482766028

Related post